ಬೆಳಗಾವಿ: 1992 ರ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ, 1999 ಕಾರ್ಗಿಲ್ ಯುದ್ಧ ಸೇರಿದಂತೆ ದೇಶದ ಅನೇಕ ಸೈನಿಕ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಭಾರತೀಯ ಸೇನೆಯಲ್ಲಿ ಅಮೋಘ 30 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿ ಮರಳಿ ಬಂದ ಕ್ಯಾಪ್ಟನ್ ರಾಮಪ್ಪ ಕೊಳ್ಳಿ ಅವರಿಗೆ ಸ್ವಗ್ರಾಮ ಸವದತ್ತಿ ತಾಲೂಕಿನ ಹಿರೇಕುಂಬಿ ಗ್ರಾಮಸ್ಥರು ಮತ್ತು ಸ್ಥಳೀಯ ಶಾಸಕ,ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಮತ್ತಿತರ ಗಣ್ಯರು ಪ್ರೀತಿ ಹಾಗೂ ಗೌರವದ ಭವ್ಯ ಸ್ವಾಗತ ನೀಡಿ ಬರಮಾಡಿಕೊಂಡರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಶಿಕ್ಷಕರು,ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿ ನಿವೃತ್ತ ಸೇನಾಧಿಕಾರಿಗೆ ಗೌರವ ರಕ್ಷೆ ಸಲ್ಲಿಸಿದರು.ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ರವಿವಾರ ಏ.3 ರಂದು ಸಂಜೆ ಜರುಗಿದವು.
ರಾಮಪ್ಪ ಬಿ.ಕೊಳ್ಳಿಯವರು ಹುಟ್ಟೂರು ಹಿರೇಕುಂಬಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿ, ಭಾರತೀಯ ಸೇನೆಗೆ 1992 ಮಾರ್ಚ್ 28 ರಂದು ಸೇರಿ 30 ವರ್ಷಗಳ ಕಾಲ ಸೇವೆಗೈದು ಇತ್ತೀಚೆಗೆ 2022 ರ ಮಾರ್ಚ್ 31 ರಂದು ನಿವೃತ್ತರಾದರು.
ವೀರಯೋಧರಾಗಿ ಪುಣೆ, ರಾಜಸ್ಥಾನ, ಡೆಹ್ರಾಡೂನ್, ಕಾರ್ಗಿಲ್ ಯುದ್ಧದ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ದ್ರಾಸ್ ವಲಯದಲ್ಲಿ 2000-2010 ರವರೆಗೆ ಆಪರೇಷನ್ ಪರಾಕ್ರಮ, ಉತ್ತರ ಕಾಶ್ಮೀರದ ಅಮರನಾಥ ಸುರಕ್ಷತಾ ಕಾರ್ಯಾಚರಣೆ, ಸೋನಾಮಾರ್ಗ ಸುರಕ್ಷತೆ ಮತ್ತಿತರ ಪ್ರಮುಖ ಸೇವೆಗಳ ಸಂದರ್ಭದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆಗೈದಿದ್ದಾರೆ. ಬೆಳಗಾವಿಯ ಇನ್ಫಂಟ್ರಿ ಕಮಾಂಡೋ ಶಾಲೆಯಲ್ಲಿಯೂ ಕ್ಯಾಪ್ಟನ್ ಆಗಿ ಸೇವೆಗೈದಿದ್ದಾರೆ.
ಸುದೀರ್ಘ 30 ವರ್ಷಗಳ ಕಾಲ ದೇಶಸೇವೆಗೈದ ಗ್ರಾಮದ ವೀರಪುತ್ರನಿಗೆ ಹಿರೇಕುಂಬಿ ಗ್ರಾಮಸ್ಥರು ಇಂದು ಏ.3 ರಂದು ಹೆಮ್ಮೆಯಿಂದ ಸ್ವಾಗತಿಸಿ,ಗೌರವದಿಂದ ಬರಮಾಡಿಕೊಂಡರು.
ಗ್ರಾ.ಪಂ.ಅಧ್ಯಕ್ಷೆ ಫಕೀರವ್ವ ಪುಂಡಲೀಕ ಕೊಳ್ಳಿ,ಸದಸ್ಯರಾದ ಶೇಖಪ್ಪ ದೇಶನೂರ, ಗದಗಯ್ಯ ಅಮೋಘಿಮಠ,ತಾ.ಪಂ.ಮಾಜಿ ಸದಸ್ಯ ಸುರೇಶ ಹಾರೋಬೀಡಿ, ನಿವೃತ್ತ ಸೇನಾಧಿಕಾರಿ,ಶಿಕ್ಷಕ ರಮೇಶ ಪೂಜಾರಿ,ಮಾಜಿ ಸೈನಿಕರ ಸಮನ್ವಯ ಸಮಿತಿಯ ಮಲ್ಲಿಕಾರ್ಜುನ ಗಾಣಿಗೇರ ಸೇರಿದಂತೆ ಹಿರೇಕುಂಬಿ ಹಾಗೂ ಸುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.