ಬೆಳಗಾವಿ: ಗ್ರಾಮ ಒನ್ ಕೇಂದ್ರಗಳಲ್ಲಿ ಮರಾಠಿ ಭಾಷೆಯಲ್ಲಿ ಮಾಹಿತಿ ನೀಡುವಂತೆ ತಾಲೂಕು ಆಡಳಿತಾಧಿಕಾರಿಗಳಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಸೂಚನೆ ನೀಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಜಿಲ್ಲೆಯ ಖಾನಾಪುರ ತಾಲೂಕಿನ ಗ್ರಾಮ ಒನ್ ಕೇಂದ್ರದ ಉದ್ಘಾಟನೆ ವೇಳೆ ಅಂಜಲಿ ನಿಂಬಾಳ್ಕರ್ ಮಾತನಾಡಿದ್ದು, ಖಾನಾಪುರ ತಾಲೂಕಿನಲ್ಲಿ ಕನ್ನಡ ಬಾರದ ಜನರಿಗೆ ಮರಾಠಿಯಲ್ಲಿ ಮಾಹಿತಿ ನೀಡಿ, ಕನ್ನಡ ಭಾಷೆಯ ನಾಮಫಲಕ ಜೊತೆ ಮರಾಠಿ ಭಾಷೆಯಲ್ಲೂ ನಾಮಫಲಕ ಅಳವಡಿಸಿ ಎಂದು ಸೂಚನೆ ನೀಡಿದ್ದಾರೆ.
ಖಾನಾಪುರ ತಾಲೂಕಿನಲ್ಲಿ ಮರಾಠಿ, ಕನ್ನಡ ಎರಡು ಭಾಷೆಯ ಜನರಿದ್ದಾರೆ. ಸಾಕಷ್ಟು ಜನರಿಗೆ ಕನ್ನಡ ಭಾಷೆ ತಿಳಿಯಲ್ಲ, ಅರ್ಥ ಆಗಲ್ಲ. ಅವರು ಈಗ ಕನ್ನಡ ಅಭ್ಯಾಸ ಮಾಡುತ್ತಿದ್ದಾರೆ, ಕಲಿಯಲು ಸಹ ಮುಂದೆ ಬಂದಿದ್ದಾರೆ.
ಕನ್ನಡ ಭಾಷೆಯ ಮಾಹಿತಿ ಫಲಕ ಜೊತೆ ಮರಾಠಿ ಭಾಷೆಯ ಮಾಹಿತಿ ಫಲಕ ಹಾಕಿಕೊಡಿ. ನಾವು ಜನ ಸೇವೆ ಮಾಡುತ್ತಿದ್ದು ಜನರಿಗೆ ತಿಳಿಯುವ ಭಾಷೆಯಲ್ಲಿ ಹೇಳಬೇಕು. ಅದಕ್ಕೆ ಕನ್ನಡ ಭಾಷೆ ಜೊತೆ ಮರಾಠಿ ಭಾಷೆಗಳ ಫಲಕ ಹಾಕಿ ಅಂತಾ ಒತ್ತಾಯಿಸುವೆ ಎಂದು ಶಾಸಕಿ ಅಂಜಲಿ ನಿಂಬಾಳ್ಕರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಂಜಲಿ ನಿಂಬಾಳ್ಕರ್ ವಿರುದ್ಧ ಕನ್ನಡಿಗರು ತೀವ್ರ ಆಕ್ರೋಶ ಹೊರಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೆದ 60 ವರ್ಷಗಳಿಂದ ಕರ್ನಾಟಕದಲ್ಲಿ ಇದ್ದು ಕನ್ನಡ ಕಲಿಯದೇ ಇರುವುದು ಯಾರ ತಪ್ಪು..? ಮಹಾರಾಷ್ಟ್ರದ ಕನ್ನಡ ಪ್ರದೇಶಗಳಲ್ಲಿ ಮಹಾರಾಷ್ಟ್ರ ಸರ್ಕಾರ ಕನ್ನಡದಲ್ಲಿ ಸೇವೆ ನೀಡುತ್ತಿದ್ದಾರಾ..? ಮಹಾರಾಷ್ಟ್ರದಲ್ಲಿ ಕನ್ನಡ ಶಾಲೆಗಳ ಮೇಲೆ ಯಾವ ರೀತಿ ದರ್ಪ ತೋರುತ್ತಿದ್ದಾರೆ ನಿಮಗೆ ಗೊತ್ತಾ? ಎಂದು ಪ್ರಶ್ನಿಸಿದ್ದಾರೆ.