ಕೊಪ್ಪಳ ಫೆಬ್ರವರಿ ೦೪ : ಕ್ಯಾನ್ಸರ್ ಮುಂಜಾಗೃತೆ ಹಾಗೂ ಚಿಕಿತ್ಸೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಅಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಅಲಕನಂದಾ ಮಳಗಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಎನ್.ಸಿ.ಡಿ. ಕೋಶ ಕೊಪ್ಪಳ, ಇವರ ಸಂಯುಕ್ತಾಶ್ರಯದಲ್ಲಿ ಫೆಬ್ರವರಿ ೦೪ ರಂದು ಹಮ್ಮಿಕೊಂಡಿದ್ದ “ವಿಶ್ವ ಕ್ಯಾನ್ಸರ್ ದಿನ” ಅಂಗವಾಗಿ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ನಗರದ ಹಳೆ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಹಸಿರು ನಿಶಾನೆ ತೊರಿಸುವುದರ ಮೂಲಕ ಚಾಲನೆ ನೀಡಿ, ಅವರು ಮಾತನಾಡಿದರು.
ವಿಶ್ವ ಕ್ಯಾನ್ಸರ್ ದಿನಾಚರಣೆ ಆಚರಿಸುವ ಉದ್ದೇಶ ಕ್ಯಾನ್ಸರ್ ಖಾಯಿಲೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು, ಖಾಯಿಲೆ ಹೇಗೆ ಬರುತ್ತದೆ, ಅದರ ಲಕ್ಷಣಗಳೇನು?, ಯಾವ ರೀತಿ ಮುಂಜಾಗೃತೆ ತೆಗೆದುಕೊಳ್ಳಬೇಕು ಮತ್ತು ಯಾವ ರೀತಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವದಾಗಿದೆ. ಬದಲಾದ ಜೀವನ ಶೈಲಿಯಿಂದ ಬರುವ ರೋಗಗಳಲ್ಲಿ ಕ್ಯಾನ್ಸರ್ ಖಾಯಿಲೆ ಕೂಡ ಒಂದಾಗಿದೆ. “ಕ್ಯಾನ್ಸರ್ ಕಾಯಿಲೆ ಬಗ್ಗೆ ನಿರ್ಲಕ್ಷ ಬೇಡ” ತಿಳುವಳಿಕೆ ಇರಲಿ (ಪ್ರೆವೆನ್‌ಷನ್ ಇಸ್ ಬೆಟರ್ ದೆನ್ ಕೇರ್) ಎಂಬ ಧ್ಯೆಯದೊಂದಿಗೆ ಮುಂಜಾಗೃತೆಗಾಗಿ ೩೦ ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಕನಿಷ್ಟ ೫ ವರ್ಷಕ್ಕೊಮ್ಮೆ ತಮ್ಮ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಕ್ಯಾನ್ಸರ್ ಸಂಭಂಧಿಸಿದ ಪರಿಕ್ಷೆ ಮಾಡಿಸಿ ಕೊಳ್ಳಬೇಕು. ಆದಷ್ಟು ಬೇಗ ಗುರುತಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು. ದುಶ್ಚಟಗಳಿಂದ ದೂರವಿರುವುದರಿಂದ, ಉತ್ತಮ ಆರೋಗ್ಯಕರ ಆಹಾರ ಸೇವನೆ, ಸರಿಯಾದ ವ್ಯಾಯಾಮ ಕ್ರಮ ಅನುಸರಿಸುವುದು, ಹೆಚ್.ಪಿ.ವ್ಹಿ. ಮತ್ತು ಹೆಪಾಟೈಟಿಸ್ ನಂತಹ ಮಾರಕ ವೈರಾಣುಗಳಿಗೆ ಲಸಿಕೆ ಪಡೆಯುವುದು, ಔದ್ಯೋಗಿಕ ರೇಡಿಯೀಷನ್‌ಗೆ ಒಳಗಾಗದಂತೆ ಪಿ.ಪಿ.ಇ. ಕಿಟ್‌ಗಳನ್ನು ಬಳಸುವುದು ಮತ್ತು ಪರಿಸರ ಮಾಲಿನ್ಯ ನಿಯಂತ್ರಣದಂತಹ ಮುಂಜಾಗೃತಾ ಕ್ರಮಗಳಿಂದ ಕ್ಯಾನ್ಸರ್ ಕಾಯಿಲೆಯನ್ನು ತಡೆಗಟ್ಟಬಹುದಾಗಿದೆ. ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರು ಇದರ ಬಗ್ಗೆ ಜಾಗೃತಿ ವಹಿಸಕೊಂಡು ಜಿಲ್ಲೆಯ ಸಾರ್ವಜನಿಕರಿಗೆ ತಿಳಿಸಬೇಕೆಂದು ಹೇಳಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ನಂದಕುಮಾರ ಅವರು ಮಾತನಾಡಿ, ಪ್ರತಿ ವರ್ಷ ಫೆಬ್ರವರಿ ೦೪ ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ “ನಮ್ಮ ಧ್ವನಿಗಳನ್ನು ಕೂಡಿಸೋಣ ಮತ್ತು ಕ್ರಮ ಕೈಗೊಳ್ಳೊಣ” ಎಂಬ ಘೋಷವಾಕ್ಯದೊಂದಿಗೆ ಸಮುದಾಯದಲ್ಲಿ ಕ್ಯಾನ್ಸರ್ ರೋಗದ ಬಗ್ಗೆ, ಮುಂಜಾಗೃತೆ, ಚಿಕಿತ್ಸೆಯಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ.ರಾಮಾಂಜನೇಯ, ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಗೀತಾ, ಆಯುಷ್ ವೈದ್ಯರಾದ ಡಾ.ಮಹೇಶ ಉಮಚಿಗಿ, ಜಿಲ್ಲಾ ಎನ್.ಸಿ.ಡಿ ಕಾರ್ಯಕ್ರಮ ಸಂಯೋಜಕರಾದ ಬಸಪ್ಪ ಸವಟಗಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಸೇರಿದಂತೆ ವಿವಿಧ ವೃಂದದ ಅಧಿಕಾರಿ, ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
*ಜಾಗೃತಿ ಜಾಥಾ:* ವಿಶ್ವ ಕ್ಯಾನ್ಸರ್ ದಿನಾಚರಣೆ ನಿಮಿತ್ತ ಆರೋಗ್ಯ ಇಲಾಖೆಯ ಐ.ಇ.ಸಿ. ವಾಹನದ ಮೂಲಕ ಜಾಗೃತಿ ಜಾಥಾ ಕಾರ್ಯಕ್ರಮವು ನಗರದ ಹಳೆ ಜಿಲ್ಲಾ ಆಸ್ಪತ್ರೆಯಿಂದ ಪ್ರಾರಂಭಗೊಂಡು, ಕೇಂದ್ರ ಬಸ್ ನಿಲ್ದಾಣ, ಕಾರ್ಮಿಕರ ವೃತ್ತ, ಡಾ.ಸಿಂಪಿಲಿಂಗಣ್ಣ ರಸ್ತೆ, ಅಜಾದ್ ವೃತ್ತ, ಅಶೋಕ ವೃತ್ತದ ವರೆಗೆ ನಡೆಯಿತು. ಜಾಥದಲ್ಲಿ ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದ ಜಾಗೃತಿ ಘೋಷಣೆಗಳನ್ನು ಕೂಗುತ್ತ ಮತ್ತು ಕರ ಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಿ, ಅರಿವು ಮೂಡಿಸಲಾಯಿತು. ಜಾಥವು ಮರಳಿ ಹಳೆ ಜಿಲ್ಲಾ ಆಸ್ಪತ್ರೆಯ ಆವರಣದವರೆಗೆ ತಲುಪಿತು.
*ಜಿಲ್ಲೆಯ ವಿವಿಧೆಡೆ ಕಾರ್ಯಕ್ರಮ, ಹಿರೇಸಿಂದೋಗಿಯಲ್ಲಿ ತಪಾಸಣಾ ಶಿಬಿರ:* ವಿಶ್ವ ಕ್ಯಾನ್ಸರ್ ದಿನ ಅಂಗವಾಗಿ ಜಿಲ್ಲೆಯಾದ್ಯಂತ ತಾಲೂಕಾ ಆಸ್ಪತ್ರೆಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಉಪಕೇಂದ್ರ, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ. ಕೊಪ್ಪಳ ತಾಲ್ಲೂಕಿನ ಹಿರೇಸಿಂದೋಗಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಷೇಶವಾಗಿ ಕ್ಯಾನ್ಸರ್ ಸ್ಕ್ರೀನಿಂಗ್ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
Gadi Kannadiga > State > ವಿಶ್ವ ಕ್ಯಾನ್ಸರ್ ದಿನಾಚರಣೆಯ ಜನಜಾಗೃತಿ ಜಾಥಾ ಕಾರ್ಯಕ್ರಮ — *ಕ್ಯಾನ್ಸರ್ ಮುಂಜಾಗೃತೆ, ಚಿಕಿತ್ಸೆ ಬಗ್ಗೆ ಅರಿವು ಅಗತ್ಯ : ಡಾ.ಅಲಕನಂದಾ ಮಳಗಿ*
ವಿಶ್ವ ಕ್ಯಾನ್ಸರ್ ದಿನಾಚರಣೆಯ ಜನಜಾಗೃತಿ ಜಾಥಾ ಕಾರ್ಯಕ್ರಮ — *ಕ್ಯಾನ್ಸರ್ ಮುಂಜಾಗೃತೆ, ಚಿಕಿತ್ಸೆ ಬಗ್ಗೆ ಅರಿವು ಅಗತ್ಯ : ಡಾ.ಅಲಕನಂದಾ ಮಳಗಿ*
Suresh04/02/2023
posted on
