ಕುಷ್ಟಗಿ:-ಗ್ರಾಮೀಣ ಪ್ರದೇಶದ ಹಾಗೂ ಕಾರ್ಮಿಕರ ಮಕ್ಕಳೂ ಸಹ ನೀಟ್ ಪರೀಕ್ಷೆಯಲ್ಲಿ ಹೆಚ್ಚಿನ ಶ್ರೇಯಾಂಕ ಪಡೆಯುತ್ತಿರುವುದು ಗಮನಾರ್ಹ ಎಂದು ಎಸ್ ವಿ ಸಿ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಸಿ ವಿ ಚಂದ್ರಶೇಖರ್ ಹೇಳಿದರು.
ಎಸ್ ವಿ ಸಿ ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿನ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
‘ಮಸ್ಕಿ ಪಟ್ಟಣದ ಪೌರಕಾರ್ಮಿಕರ ಮಗ ಇತ್ತೀಚೆಗೆ ನೀಟ್ ಪರೀಕ್ಷೆಯಲ್ಲಿ ಹೆಚ್ಚಿನ ಶ್ರೇಯಾಂಕ ತೆಗೆದುಕೊಂಡಿದ್ದಾನೆ. ಬಿಹಾರದ ಕಾರ್ಮಿಕರ ಮಗ ದೇಶವೇ ಮೆಚ್ಚುವಂತಹ ಸಾಧನೆಯನ್ನು ನೀಟ್ ಪರೀಕ್ಷೆಯಲ್ಲಿ ಮಾಡಿದ್ದಾನೆ. ಇವರು ಗ್ರಾಮೀಣ ಪ್ರತಿಭೆಗಳು. ಕನಿಷ್ಠ ಸೌಕರ್ಯ, ಉತ್ತಮ ಪುಸ್ತಕಗಳು, ಗುಣಮಟ್ಟದ ಬೋಧನೆ ಹಾಗೂ ವಿದ್ಯಾರ್ಥಿಗಳ ಪರಿಶ್ರಮ ಇದ್ದರೆ ನೀಟ್, ಸಿಇಟಿ ಮತ್ತು ಜೆಇಇ ಪರೀಕ್ಷೆಗಳಲ್ಲಿ ಸುಲಭವಾಗಿ ಉತ್ತಮ ದರ್ಜೆ ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚಿನ ಶ್ರೇಯಾಂಕ ಪಡೆಯುತ್ತಿರುವುದು ಅವರಲ್ಲಿನ ಪ್ರತಿಭೆಗೆ ಹಿಡಿದ ಕೈಗನ್ನಡಿ,’ ಎಂದು ಹೇಳಿದರು.
ಎಸ್ ವಿ ಸಿ ಕಾಲೇಜು ದೇಶದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ ವಿತರಣೆಗಾಗಿ ಕೈಜೋಡಿಸಿದೆ. ಈ ಪುಸ್ತಕಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಧರ್ಮ ಗ್ರಂಥಗಳಿದ್ದಂತೆ. ನಮ್ಮ ಭಾಗದ ಮಕ್ಕಳು ಇಂತಹ ಪರೀಕ್ಷೆಗಳಲ್ಲಿ ಹೆಚ್ಚಿನ ಶ್ರೇಯಾಂಕ ಪಡೆಯಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದರು.
ನಮ್ಮ ಭಾಗದಲ್ಲಿ ಈ ರೀತಿಯ ಯೋಜನೆ ಪ್ರಥಮ ಪ್ರಯೋಗವಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು ಪರೀಕ್ಷೆಗೆ ಸಿದ್ಧರಾಗಬೇಕೆಂದು ಕಾಲೇಜಿನ ಪ್ರಾಂಶುಪಾಲ ಭೀಮಸೇನ್ ಆಚಾರ್ ಹೇಳಿದರು.
ಪಿಯು ನಂತರದ ಸ್ಪರ್ಧಾತ್ಮಕ ಪರೀಕ್ಷೆಗಳಾಚೆ ವಿಜ್ಞಾನ ವಿಷಯವನ್ನು ಜನಪ್ರಿಯಗೊಳಿಸಲು ಅನೇಕ ಯೋಜನೆಗಳನ್ನು ಕಾಲೇಜು ಹಮ್ಮಿಕೊಂಡಿದೆ. ವಿದ್ಯಾರ್ಥಿಗಳಿಗೆ ಉಚಿತವಾಗಿ ದಿನಪತ್ರಿಕೆಗಳನ್ನು ವಿತರಿಸಲಾಗುತ್ತಿದೆ. ಅವರಲ್ಲಿ ಓದಿನ ಹಿನ್ನೆಲೆಯನ್ನು ಜಾಗೃತಗೊಳಿಸುವ ಕೆಲಸ ನಡೆದಿದೆ ಎಂದು ಸಂಸ್ಥೆಯ ಸಿಇಒ ಡಾ. ಜಗದೀಶ್ ಅಂಗಡಿ ಹೇಳಿದರು.
ಪ್ರತಿ ವಿದ್ಯಾರ್ಥಿಗೆ ನಾಲ್ಕು ಪುಸ್ತಕಗಳನ್ನು ವಿತರಿಸಲಾಯಿತು.
ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಅರುಣ್ ಕರ್ಮಾರ್ಕರ್ ಹಾಗೂ ಎಸ್ ವಿ ಸಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಭೀಮರಾವ್ ಕುಲಕರ್ಣಿ ಹಾಜರಿದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ