ಸಮಾಜದ ಸಮಸ್ತ ಆಗುಹೋಗುಗಳನ್ನು ವಿಶ್ಲೇಷಿಸುವ ಮಹತ್ವದ ಹೊಣೆಗಾರಿಕೆ ಪತ್ರಕರ್ತರ ಮೇಲೆ ; ಕುಲಪತಿ ಪ್ರೊ. ಸಿ.ಎಂ ತ್ಯಾಗರಾಜ್

Murugesh Shivapuji
ಸಮಾಜದ ಸಮಸ್ತ ಆಗುಹೋಗುಗಳನ್ನು ವಿಶ್ಲೇಷಿಸುವ ಮಹತ್ವದ ಹೊಣೆಗಾರಿಕೆ ಪತ್ರಕರ್ತರ ಮೇಲೆ ; ಕುಲಪತಿ ಪ್ರೊ. ಸಿ.ಎಂ ತ್ಯಾಗರಾಜ್
WhatsApp Group Join Now

ಬೆಳಗಾವಿ: ಪತ್ರಕರ್ತರ ಕೆಲಸ ಹೊರಗೆ ಮೌನವಾಗಿ ಕಾಣಬಹುದು. ಆದರೆ, ಅದು ಸಮಾಜದ ಒಳಗೆ ದೊಡ್ಡ ಸದ್ದು ಮಾಡುತ್ತದೆ. ವ್ಯವಸ್ಥೆಯ ಲೋಪಗಳನ್ನು ಗುರುತಿಸಿ, ಅದಕ್ಕೆ ಚಿಕಿತ್ಸೆ ನೀಡುವ ವೈದ್ಯರಂತೆ ಪತ್ರಕರ್ತರು ಕೆಲಸ ಮಾಡುತ್ತಾರೆ ಸಮಾಜದ ಸಮಸ್ತ ಆಗುಹೋಗುಗಳನ್ನು ವಿಶ್ಲೇಷಿಸುವ ಮಹತ್ವದ ಹೊಣೆಗಾರಿಕೆ ಪತ್ರಕರ್ತರ ಮೇಲಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ ತ್ಯಾಗರಾಜ್ ಹೇಳಿದರು.
ನಗರದಲ್ಲಿ ಭಾನುವಾರ ಕರ್ನಾಟಕ ಪತ್ರಕರ್ತರ ಸಂಘ ಮತ್ತು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಹಮ್ಮಿಕೊಂಡ ಪತ್ರಕರ್ತರ ದಿನದ ಹಿನ್ನೆಲೆಯಲ್ಲಿ ಸಾಧನೆ ಮಾಡಿದ ಹಿರಿಯ ಪತ್ರಕರ್ತರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಒಬ್ಬ ಕ್ರಿಕೆಟ್ ಆಟಗಾರ ಒಂದೇ ಆಟದಲ್ಲಿ ತೊಡಗಿಸಿಕೊಳ್ಳುತ್ತಾನೆ. ಆದರೆ, ಪತ್ರಕರ್ತ ಒಂದೇ ಹಳಿಯಲ್ಲಿ ಸಾಗಲು ಸಾಧ್ಯವಿಲ್ಲ. ಸಮಾಜ, ಆಡಳಿತ ವ್ಯವಸ್ಥೆ, ಅನ್ಯಾಯ, ಅಭಿವೃದ್ಧಿ, ಬದಲಾವಣೆ ಮತ್ತು ಸುಧಾರಣೆ ಎಲ್ಲವನ್ನೂ ಏಕಕಾಲದಲ್ಲಿ ಗಮನಿಸಬೇಕಾಗುತ್ತದೆ. ಯಾವುದು ತಪ್ಪು, ಯಾವುದು ಸರಿ, ಯಾವುದನ್ನು ಬೆಳೆಸಬೇಕು, ಯಾವುದನ್ನು ತಡೆಯಬೇಕು ಎಂಬುದನ್ನು ವಿಶ್ಲೇಷಿಸುವ ಮಹತ್ವದ ಹೊಣೆ ಪತ್ರಕರ್ತರ ಮೇಲಿದೆ ಎಂದರು.
ಇವತ್ತಿನ ಸಮಾಜದಲ್ಲಿ ಟೊಳ್ಳು ಹೆಚ್ಚಾಗಿದ್ದು, ಗಟ್ಟಿತನ ಕಡಿಮೆಯಾಗಿದೆ. ಯುವಜನರಲ್ಲಿ ಮೌಲ್ಯಗಳ ಬೇರು ದುರ್ಬಲಗೊಳ್ಳುತ್ತಿರುವುದು ಆತಂಕಕಾರಿ. ಅವರನ್ನು ಸರಿದಾರಿಗೆ ತರುವುದು ಹೇಗೆ ಎಂಬ ಪ್ರಶ್ನೆ ನಮ್ಮ ಮುಂದಿದೆ. ಇಂತಹ ಸಂದರ್ಭದಲ್ಲಿ ಪತ್ರಕರ್ತರ ಗಟ್ಟಿ ಧ್ವನಿ, ಅಧ್ಯಯನಶೀಲತೆ ಮತ್ತು ಲೇಖನಿಯ ಶಕ್ತಿ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುತ್ತವೆ ಎಂದು ಹೇಳಿದರು.
ಒಂದು ಪುಟದಲ್ಲಿ ಹೇಳಬೇಕಾದ ಸಂಗತಿಯನ್ನು ಒಂದು ಪ್ಯಾರಾದಲ್ಲಿ, ಪ್ಯಾರಾದ ವಿಷಯವನ್ನು ಒಂದು ಸಾಲಿನಲ್ಲಿ, ಸಾಲಿನ ಅರ್ಥವನ್ನು ಒಂದೇ ಪದದಲ್ಲಿ ಹಿಡಿದಿಡುವ ಪತ್ರಕರ್ತರ ಸಾಮಥ್ರ್ಯಕ್ಕೆ ತಲೆಬಾಗಬೇಕು. ಎಂ.ಎ., ಪಿಎಚ್.ಡಿ., ನೆಟ್, ಸ್ಲೆಟ್ನಂತಹ ಶೈಕ್ಷಣಿಕ ಮಾನದಂಡಗಳಿಗಿಂತ ವೃತ್ತಿಯಲ್ಲಿ ಅವರು ಮಾಡಿದ ನಿರಂತರ ಕೃಷಿ ಮತ್ತು ಪಡೆದ ಅನುಭವ ದೊಡ್ಡದು. ಅದು ಯಾವ ತಪಸ್ಸಿಗೂ ಕಡಿಮೆಯಿಲ್ಲ ಎಂದರು.
ಆದರೆ, ಬರಹದ ಯಶಸ್ಸು ಅಹಂಕಾರಕ್ಕೆ ಕಾರಣವಾಗಬಾರದು ಎಂದು ಎಚ್ಚರಿಸಿದ ಅವರು, ಒಂದು ಲೇಖನ ದೊಡ್ಡ ಸದ್ದು ಮಾಡಬಹುದು. ಅಷ್ಟಕ್ಕೇ ಪ್ರಪಂಚ ನಮ್ಮ ಮುಷ್ಟಿಯಲ್ಲಿದೆ ಎಂದು ಭಾವಿಸಬಾರದು. ಜಗತ್ತಿನ ಸಾಧ್ಯತೆಗಳು ವಿಶಾಲವಾಗಿವೆ. ಬರಹಗಾರ ಸದಾ ಕಲಿಯುವ ವಿನಯವನ್ನು ಉಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪತ್ರಕರ್ತರು ವೃತ್ತಿಜೀವನದಲ್ಲಿ ಎದುರಿಸುವ ನಿರಾಸೆ, ಒತ್ತಡ ಮತ್ತು ಕಷ್ಟಗಳನ್ನು ಪ್ರಸ್ತಾಪಿಸಿದ ಅವರು, ಒಂದು ಬರಹ ಪ್ರಕಟವಾಗದಿರಬಹುದು; ಒಂದು ಪ್ರಯತ್ನ ವಿಫಲವಾಗಬಹುದು. ಅದಕ್ಕಾಗಿ ವೃತ್ತಿಯನ್ನೇ ಕೈಬಿಡಬಾರದು. ಒಂದು ಬಾಗಿಲು ಮುಚ್ಚಿದರೆ ಮತ್ತೊಂದು ದೊಡ್ಡ ಬಾಗಿಲು ತೆರೆಯುತ್ತದೆ. ನೋವು ಶಾಶ್ವತವಲ್ಲ; ಸಾಧಿಸುವ ಛಲ ಮತ್ತು ಸತ್ಯದ ದಾರಿಯಲ್ಲಿ ನಡೆಯುವ ನಿಶ್ಚಲತೆ ಮುಖ್ಯ ಎಂದರು…
ಹೆಣ್ಣುಮಕ್ಕಳಿಗಾಗಿ ದೊಡ್ಡ ವಸತಿನಿಲಯ ನಿಮರ್ಿಸುವ ನಾಗನೂರು ಮಠದ ಆಶಯವನ್ನು ಪ್ರೊ. ತ್ಯಾಗರಾಜ್ ಶ್ಲಾಘಿಸಿದರು. ಮಠದ ದೂರದೃಷ್ಟಿ ಮತ್ತು ಆತ್ಮೀಯತೆಯ ಫಲವಾಗಿ ಈ ಯೋಜನೆ ರೂಪುಗೊಳ್ಳುತ್ತಿದೆ. ಇದು ಬೆಳಗಾವಿಗೆ, ಅದರಲ್ಲೂ ಶಿಕ್ಷಣ ಪಡೆಯುವ ಹೆಣ್ಣುಮಕ್ಕಳಿಗೆ ದೊಡ್ಡ ಆಶೀವರ್ಾದವಾಗಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಮಠದೊಂದಿಗೆ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.

ಪತ್ರಕರ್ತರಿಗೆ ಸಕರ್ಾರದ ಭದ್ರತೆ ಅಗತ್ಯ
ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಹೊಣೆ ಹೊತ್ತು, ವಸ್ತುನಿಷ್ಠ ಹಾಗೂ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಸಕರ್ಾರ ವಿಶೇಷ ಬೆಂಬಲ ನೀಡಬೇಕು. ಅವರ ಬದುಕಿಗೆ ಆಥರ್ಿಕ ಮತ್ತು ಸಾಮಾಜಿಕ ಭದ್ರತೆ ಕಲ್ಪಿಸುವ ವ್ಯವಸ್ಥೆ ರೂಪಿಸಬೇಕು ಎಂದು ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ಹೇಳಿದರು.
ಪತ್ರಕರ್ತರು ಯಾವುದೇ ಸಕರ್ಾರಿ ಇಲಾಖೆಯ ನಿಯಂತ್ರಣದಲ್ಲಿ ಕೆಲಸ ಮಾಡುವವರಲ್ಲ. ಕುಟುಂಬದ ಜವಾಬ್ದಾರಿಯನ್ನೂ ನಿಭಾಯಿಸಿಕೊಂಡು ಸಮಾಜದ ಒಳಿತಿಗಾಗಿ ದುಡಿಯುವ ಅವರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಾರೆ. ಆದರೆ, ಅವರಿಗೆ ದೊರೆಯುವ ಪ್ರೋತ್ಸಾಹ ಮತ್ತು ಭದ್ರತೆ ಅತ್ಯಂತ ಕಡಿಮೆ ಎಂದು ಕಳವಳ ವ್ಯಕ್ತಪಡಿಸಿದರು.
ಅಪಘಾತ, ಅನಾರೋಗ್ಯ ಸೇರಿದಂತೆ ಸಂಕಷ್ಟದ ಸಂದರ್ಭಗಳಲ್ಲಿ ಪತ್ರಕರ್ತರಿಗೆ ಪರಿಹಾರ ನೀಡುವುದು, ವಿಮೆ ಮಾಡಿಸುವುದು ಹಾಗೂ ಅವರ ಕುಟುಂಬಗಳಿಗೆ ಆಸರೆಯಾಗುವ ಕೆಲಸವನ್ನು ಕನರ್ಾಟಕ ಪತ್ರಕರ್ತರ ಸಂಘ ಹಲವು ವರ್ಷಗಳಿಂದ ಮಾಡುತ್ತಿದೆ. ಇದು ಶ್ಲಾಘನೀಯ ಕಾರ್ಯ. ಇತರ ಪತ್ರಕರ್ತರ ಸಂಘಗಳೂ ಭದ್ರತಾ ನಿಧಿ ಸ್ಥಾಪಿಸಿ, ಸದಸ್ಯರಿಗೆ ವಿಮಾ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಎಐ ಸವಾಲಿಗೆ ತಕ್ಕಂತೆ ಬದಲಾಗಬೇಕು
ಡಿಜಿಟಲ್ ಮಾಧ್ಯಮದ ಬೆಳವಣಿಗೆಯಿಂದ ಪತ್ರಿಕಾ ಕ್ಷೇತ್ರ ವೇಗವಾಗಿ ಬದಲಾಗುತ್ತಿದೆ. ಎಐ ತಂತ್ರಜ್ಞಾನವೇ ಸುದ್ದಿ ಓದುವ ಹಂತಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಪತ್ರಕರ್ತರ ಅಗತ್ಯವೇ ಇಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ, ಕಾಲದ ಬದಲಾವಣೆಗೆ ತಕ್ಕಂತೆ ಪತ್ರಕರ್ತರು ತಮ್ಮ ಕೌಶಲಗಳನ್ನು ವೃದ್ಧಿಸಿಕೊಂಡು, ಹೊಸ ವ್ಯವಸ್ಥೆಯೊಳಗೆ ಬದುಕು ಕಟ್ಟಿಕೊಳ್ಳುವ ಮಾರ್ಗ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಪತ್ರಿಕಾ, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸಿರುವುದು ಅಭಿನಂದನೀಯ. ಇಂಥ ಸನ್ಮಾನಗಳು ಮತ್ತಷ್ಟು ಉತ್ತಮ ಕೆಲಸ ಮಾಡಲು ಸಾಧಕರಿಗೆ ಉತ್ತೇಜನ ನೀಡುತ್ತವೆ ಎಂದು ಸ್ವಾಮೀಜಿ ಹೇಳಿದರು.
ಸಂಯುಕ್ತ ಕರ್ನಾಟಕದ ಬೆಳಗಾವಿ ಮುಖ್ಯ ವರದಿಗಾರ ವಿಲಾಸ್ ಜೋಶಿ ಅವರಿಗೆ ಸಮದರ್ಶಿ ಪ್ರಶಸ್ತಿ , ಕನ್ನಡಪ್ರಭ ದಿನಪತ್ರಿಕೆ ಬೆಳಗಾವಿ ಪ್ರಧಾನ ವರದಿಗಾರ ಶ್ರೀಶೈಲ್ ಮಠದ ಅವರಿಗೆ ಹಸಿರು ಕ್ರಾಂತಿ ಪ್ರಶಸ್ತಿ , ನ್ಯೂಸ್ ಫಸ್ಟ್ ಕನ್ನಡ ಟಿವಿಯ ಬೆಳಗಾವಿ ಹಿರಿಯ ವರದಿಗಾರ ಶ್ರೀಕಾಂತ್ ಕುಬಕಡ್ಡಿ ಗಡಿ ಕನ್ನಡಿಗ ಪ್ರಶಸ್ತಿ , ತರುಣ್ ಭಾರತ್ ಪತ್ರಿಕೆ ಹಿರಿಯ ವರದಿಗಾರ ರಮೇಶ್ ಹಿರೇಮಠ ಅವರಿಗೆ ಲೋಕವಾರ್ತೆ ಪ್ರಶಸ್ತಿ ಮತ್ತು ವೇಣು ಧ್ವನಿ ರೇಡಿಯೋ ಕಾರ್ಯಕ್ರಮ ಸಂಯೋಜಕ ಮಂಜುನಾಥ ಬಳ್ಳಾರಿ ಅವರಿಗೆ ಎರಡನೇ ರಾಜಧಾನಿ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು ಹಾಗೂ ಪತ್ರಿಕೆಗಳ ವೆಬ್ಸೈಟ್ ಡಿಸೈನರ್ ನಾಗೇಶ್ ವನ್ನೂರ್ ಅವರನ್ನು ಸಹ ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.
ಡಿಸಿಪಿ ಎನ್.ವಿ. ಬರಮನಿ ಮಾತನಾಡಿ, ಡಿಜಿಟಲ್ ಹಾಗೂ ಸಾಮಾಜಿಕ ಮಾಧ್ಯಮಗಳ ಪೈಪೋಟಿಯಲ್ಲಿ ಸುದ್ದಿಯನ್ನು ಮೊದಲು ನೀಡುವ ಧಾವಂತವು ಅನಾರೋಗ್ಯಕರ ಸ್ಪಧರ್ೆಯಾಗಿ ಪರಿಣಮಿಸಬಾರದು. ಧಾರ್ಮಿಕ ಮತ್ತು ಸೂಕ್ಷ್ಮ ವಿಷಯಗಳನ್ನು ಅತಿರಂಜಿತಗೊಳಿಸದೆ, ಸಂಯಮ ಹಾಗೂ ಹೊಣೆಗಾರಿಕೆಯಿಂದ ವರದಿ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್ ಎಂ.ಅವರು ಸುಳ್ಳುಸುದ್ದಿ ಮತ್ತು ತಪ್ಪು ಮಾಹಿತಿಯ ಹಾವಳಿ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಜವಾಬ್ದಾರಿಯುತ ಹಾಗೂ ನೈತಿಕ ಪತ್ರಿಕೋದ್ಯಮ ಅನಿವಾರ್ಯವಾಗಿದೆ ಎಂದರು.
ಸತ್ಯಾಂಶವನ್ನು ಪರಿಶೀಲಿಸಿ ಜನರಿಗೆ ಸರಿಯಾದ ಮಾಹಿತಿ ತಲುಪಿಸುವ ಹೊಣೆ ಮಾಧ್ಯಮದ ಮೇಲಿದೆ ಎಂದು ಅವರು ಹೇಳಿದರು.
ವಿಟಿಯು ಕುಲಸಚಿವ ಪ್ರಸಾದ ರಾಂಪುರೆ, ಪತ್ರಕರ್ತ ಬ್ರಹ್ಮಾನಂದ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಂಗಲಾ ಮೆಟಗುಡ್, ಬಸವರಾಜ ರೊಟ್ಟಿ ಮುಂತಾದವರು ಮಾತನಾಡಿದರು. ಪತ್ರಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷ ಮುರುಗೇಶ ಶಿವಪೂಜಿ ಅಧ್ಯಕ್ಷತೆ ವಹಿಸಿ ಸಂಘದ ಬೆಳವಣಿಗೆ ಮತ್ತು ಉದ್ದೇಶದ ಬಗ್ಗೆ ವಿವರಿಸಿದರು. ಸದಾನಂದ ಮಜತಿ ಸ್ವಾಗತಿಸಿದರು. ಸಂಪತಕುಮಾರ ಮುಚಳಂಬಿ ಕಾರ್ಯಕ್ರಮ ನಿರೂಪಣೆ ಮಾಡಿದರು, ಚನ್ನಬಸಪ್ಪ ರೊಟ್ಟಿ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು, ಮಂಜುನಾಥ್ ಪ್ಯಾಟಿ, ಶಂಕರ್ ಕುದುರೆಮೋತಿ, ವಸಂತ ಹೊಸಮನಿ, ರಾಜೇಂದ್ರ ಪವಾರ್, ಹೀರೋಜಿ ಮಾವರ್ಕರ್, ಗುರುರಾಜ ಕದಂ, ಜಯಪ್ರಕಾಶ್ ಜೋಶಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಸವರಾಜ ಪುಟ್ಟಿ ವಂದಿಸಿದರು.

WhatsApp Group Join Now
Telegram Group Join Now
Share This Article
error: Content is protected !!