ಬೆಳಗಾವಿಯಲ್ಲಿ ಅಭಿನಯ ಸಹಿತ ರಂಗ ಸಂಗೀತ ತರಬೇತಿ ಕಾರ್ಯಾಗಾರಕ್ಕೆ ಚಾಲನೆ

Murugesh Shivapuji
ಬೆಳಗಾವಿಯಲ್ಲಿ ಅಭಿನಯ ಸಹಿತ ರಂಗ ಸಂಗೀತ ತರಬೇತಿ ಕಾರ್ಯಾಗಾರಕ್ಕೆ ಚಾಲನೆ
WhatsApp Group Join Now

ಬೆಳಗಾವಿ, ಜು.  : ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೃತ್ತಿ ರಂಗಭೂಮಿ ರಂಗಾಯಣ, ದಾವಣಗೆರೆ ವತಿಯಿಂದ ಆಯೋಜಿಸಲಾಗಿರುವ 15 ದಿನಗಳ ಅಭಿನಯ ಸಹಿತ ರಂಗ ಸಂಗೀತ ತರಬೇತಿ ಕಾರ್ಯಾಗಾರಕ್ಕೆ ಗುರುವಾರ ನಗರದ ಬಸವರಾಜ್ ಕಟ್ಟೀಮನಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅದ್ದೂರಿಯಾಗಿ ಚಾಲನೆ ನೀಡಲಾಯಿತು.

ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ವೃತ್ತಿ ರಂಗಭೂಮಿಯಲ್ಲಿ ಅಭಿನಯ, ರಂಗ ಸಂಗೀತ ಹಾಗೂ ನಾಟ್ಯ ಸಂಗೀತದಂತಹ ಸಮೃದ್ಧ ಪರಂಪರೆಗಳಿದ್ದು, ಅವುಗಳಲ್ಲಿ ರಂಗ ಸಂಗೀತಕ್ಕೆ ವಿಶೇಷ ಸ್ಥಾನಮಾನವಿದೆ ಎಂದು ಹೇಳಿದರು.

ಉತ್ತರ ಕರ್ನಾಟಕದಲ್ಲಿ ಹಿಂದೂಸ್ತಾನಿ ಸಂಗೀತಕ್ಕೆ ಮಹತ್ವವಿದ್ದರೆ, ದಕ್ಷಿಣ ಕರ್ನಾಟಕದಲ್ಲಿ ಕರ್ನಾಟಕ (ದಕ್ಷಿಣಾದಿ) ಸಂಗೀತ ಪರಂಪರೆ ಬೆಳೆದು ಬಂದಿದೆ. ಈ ಹಿನ್ನೆಲೆಯಲ್ಲಿಯೇ ಹಿಂದಿನ ವೃತ್ತಿ ನಾಟಕ ಕಂಪನಿಗಳ ಹೆಸರಿನಲ್ಲಿಯೇ ‘ನಾಟ್ಯ ಸಂಗೀತ ಮಂಡಳಿ’ ಎಂಬ ಪದ ಬಳಕೆಯಲ್ಲಿತ್ತು. ವೃತ್ತಿ ರಂಗಭೂಮಿಯ ಸಂಗೀತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ದಾವಣಗೆರೆ ರಂಗಾಯಣವು ಈಗಾಗಲೇ ದಾವಣಗೆರೆ ಮತ್ತು ಮೈಸೂರಿನಲ್ಲಿ ಇಂತಹ ಕಾರ್ಯಾಗಾರಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದು, ಇದೀಗ ಬೆಳಗಾವಿ ವಿಭಾಗ ಮಟ್ಟದಲ್ಲಿ ಈ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.

ವೃತ್ತಿ ರಂಗಭೂಮಿಯಲ್ಲಿ ಕಾಲಕ್ಕೆ ತಕ್ಕಂತೆ ಆಗುತ್ತಿರುವ ಬದಲಾವಣೆಗಳು ಹಾಗೂ ರಂಗಭೂಮಿ ಅಳವಡಿಸಿಕೊಳ್ಳಬೇಕಾದ ಹೊಸ ಆಯಾಮಗಳ ಕುರಿತು ಅವರು ವಿವರಿಸಿ, ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಶುಭ ಹಾರೈಸಿದರು.

ರಂಗ ಚಿಂತಕ ಏಣಗಿ ಸುಭಾಷ್ ಅವರು ಮಾತನಾಡಿ, ತಮ್ಮ ತಂದೆ ಏಣಗಿ ಬಾಲಪ್ಪ ಅವರ ಕಾಲದ ವೃತ್ತಿ ನಾಟಕ ಕಂಪನಿಗಳು ಹಾಗೂ ಆ ಕಾಲದ ರಂಗ ಸಂಗೀತದ ಪರಂಪರೆಯ ಕುರಿತು ತಿಳಿಸಿದರು.

ಬಸವರಾಜ್ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ. ವೈ. ಬಿ. ಹಿಮ್ಮಡಿ ಅವರು ವೃತ್ತಿ ರಂಗಭೂಮಿಯ ಶ್ರೀಮಂತ ಪರಂಪರೆ ಹಾಗೂ ಅದರ ಸಾಂಸ್ಕೃತಿಕ ಮಹತ್ವವನ್ನು ವಿವರಿಸಿದರು.

ಶಿಬಿರ ನಿರ್ದೇಶಕ ರಾಜಾಪ್ರಭು ಧೋತ್ರೆ ಅವರು ಕಾರ್ಯಾಗಾರದ ಉದ್ದೇಶ ಹಾಗೂ ತರಬೇತಿಯ ಸ್ವರೂಪವನ್ನು ವಿವರಿಸಿದರು.

ಬೆಳಗಾವಿ ವಿಭಾಗದಿಂದ ಆಯ್ಕೆಯಾಗಿರುವ 20 ಅಭ್ಯರ್ಥಿಗಳಿಗೆ 15 ದಿನಗಳ ಕಾಲ ಅಭಿನಯ ಸಹಿತ ರಂಗ ಸಂಗೀತ ತರಬೇತಿ ನೀಡಲಾಗುತ್ತಿದ್ದು, ಶಿಬಿರದ ಅಂತಿಮ ದಿನದಂದು ತರಬೇತಿಯಲ್ಲಿ ಕಲಿತ ರಂಗ ಸಂಗೀತವನ್ನು ಅಭಿನಯದೊಂದಿಗೆ ಸಾರ್ವಜನಿಕವಾಗಿ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಶಿಬಿರ ಸಂಚಾಲಕ ಎನ್. ನಟರಾಜ್ ಅವರು ಸ್ವಾಗತಿಸಿದರು.

ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ. ಎಚ್. ಚನ್ನೂರ, ಸಂಗೀತ ತಜ್ಞರಾದ ಗುರುನಾಥ ಕುಲಕರ್ಣಿ ಹಾಗೂ ಮಂಜುಳಾ ಶಿ. ಜೋಶಿ ಉಪಸ್ಥಿತರಿದ್ದರು.

ನಾಡಗೀತೆ ಮತ್ತು ರಂಗಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

ಬಸವರಾಜ್ ಕುಪ್ಪಸಗೌಡರ ಅವರು ಕಾರ್ಯಕ್ರಮ ನಿರೂಪಣೆ ಮಾಡಿ, ವಂದಿಸಿದರು.

WhatsApp Group Join Now
Telegram Group Join Now
Share This Article
error: Content is protected !!