ಬೆಳಗಾವಿ; ಸಂಘಟನೆಗಳು ಸಭೆ ಸಮಾರಂಭ ಮತ್ತು ಸನ್ಮಾನಗಳಿಗೆ ಮಾತ್ರ ಸೀಮಿತವಾಗದೆ ಸಮಾಜದ ಜಟೀಲ್ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದು ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ನುಡಿದರು.
ಅವರಿಂದು ಬೆಳಗಾವಿಯಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಟ್ರಸ್ಟ್ ಗೌರವಾಧ್ಯ ಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿ ಆಶೀರ್ವಚನ ನೀಡುತ್ತಿದ್ದರು. ಸಂಘಟನೆಗಳಲ್ಲಿ ಸಮಾಜದ ಸಮಸ್ಯೆಗಳ ಕುರಿತು ಚಿಂತನೆ ನಡೆಯಬೇಕು ನಕಾರಾತ್ಮಕ ವಿಚಾರಗಳನ್ನು ಬದಿಗಿಟ್ಟು ಸಕಾರಾತ್ಮಕವಾಗಿ ಸ್ಪಂದನೆ ಆಗಬೇಕು ಎಂದರು.
ಸಾಮಾಜಿಕ ಜಾಲತಾಣಗಳ ವೇಗದ ಬೆಳವಣಿಗೆಗಳು ಲಕ್ಷಾಂತರ ಹಿಂಬಾಲಕರನ್ನು ಗಳಿಸಿಕೊಂಡು ಮುನ್ನುಗ್ಗುತ್ತಿರುವುದನ್ನು ಮಾಧ್ಯಮ ಕ್ಷೇತ್ರ ಗಂಭೀರವಾಗಿ ಪರಿಗಣಿಸುವಂತೆ ವಾತಾವರಣ ನಿರ್ಮಾಣವಾಗಿದೆ, ಮುದ್ರಣ ಮಾಧ್ಯಮ ಕೂಡ ಅದೇ ನಿಟ್ಟಿನಲ್ಲಿ ಕಾರ್ಯ ಮಾಡಬೇಕಿದೆ ಎಂದರು.
ಸಭೆಯನ್ನು ಉದ್ಘಾಟಿಸಿದ ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಸುರೇಶ್ ಶಾನುಭೋಗ ಅವರು ಮಾತನಾಡಿ ಡೋಲಾಯಮಾನ ಸ್ಥಿತಿಯಲ್ಲಿ ಪತ್ರಿಕಾರಂಗ ಇರುವಂತಹ ಈ ಘಟ್ಟದಲ್ಲಿ ಇನ್ನಷ್ಟು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು.
ಹಿರಿಯ ಪತ್ರಕರ್ತ ಎಲ್.ಎಸ್. ಶಾಸ್ತ್ರಿ ಮಾತನಾಡಿ ದಶಕಗಳ ಕಾಲದಿಂದ ನಡೆದು ಬಂದ ಸಂಘದ ಅತ್ಯುತ್ತಮ ಕಾರ್ಯವನ್ನು ಶ್ಲಾಘಿಸಿದರು. ಕನ್ನಡ ಪ್ರಭ ದಿನಪತ್ರಿಕೆ ಹಾನಿಕ ಸಂಪಾದಕ ಬ್ರಹ್ಮಾನಂದ ಹಡಗಲಿ ಮಾತನಾಡಿ ಗ್ರಾಮೀಣ ಭಾಗದ ಪತ್ರಕರ್ತರಿಗಾಗಿ ಟ್ರಸ್ಟ್ ಮಾಡುತ್ತಿರುವ ಕಾರ್ಯ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಮುಂದುವರೆಯಲಿ ಎಂದರು. ಇಂಡಿಯನ್ ಎಕ್ಸ್ಪ್ರೆಸ್ ಅಸೋಸಿಯೇಟೆಡ್ ಎಡಿಟರ್ ನೌಶಾದ ಬಿಜಾಪೂರೆ ಮಾತನಾಡಿ ಗ್ರಾಮೀಣ ಪತ್ರಕರ್ತರಿಗಾಗಿ ಟ್ರಸ್ಟ್ ಇನ್ನು ಹೆಚ್ಚಿನ ಕಾರ್ಯ ನಿರ್ವಹಿಸಲಿ ಎಂದರು. ಟ್ರಸ್ಟ್ ಕಾನೂನು ಸಲಹೆಗಾರ ಬಸವರಾಜ್ ರೊಟ್ಟಿ ಮಾತಾಡಿ ಸ್ವಂತದ ಬೇಡಿಕೆಗಳಿಗಾಗಿ ಹುಟ್ಟಿದ ಸಂಘಟನೆ ಇದಲ್ಲ ಕಷ್ಟದಲ್ಲಿ ಇರುವ ಪತ್ರಕರ್ತರಿಗಾಗಿ ಹುಟ್ಟಿಕೊಂಡ ಸಂಘಟನೆಯ ಕಾರ್ಯ ಮಾದರಿಯಾಗಿದೆ ಎಂದರು.
ಟ್ರಸ್ಟ್ ಅಧ್ಯಕ್ಷ ಮುರುಗೇಶ ಶಿವಪೂಜಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ಟ್ರಸ್ಟಿಗೆ ಹತ್ತನೆಯ ಟ್ರಸ್ಟೀಯಾಗಿ ಗದಗದ ಶಂಕರ್ ಕುದುರಿಮೋತಿ ಅವರನ್ನು ನೇಮಕ ಮಾಡಿಕೊಳ್ಳಲಾಯಿತು.
ಟ್ರಸ್ಟಿಗೆ ನೂತನ ಕಾರ್ಯದರ್ಶಿಯಾಗಿ ಮಂಗಳೂರಿನ ಸುದೇಶ್ ಕುಮಾರ್ ಅವರನ್ನು ಮತ್ತು ಉಪಾಧ್ಯಕ್ಷರನ್ನಾಗಿ ಅಂಕೋಲಾದ ಮಂಜುನಾಥ ನಾಯಕ್ ಅವರನ್ನು ಆಯ್ಕೆ ಮಾಡಲಾಯಿತು.
ಟ್ರಸ್ಟೀ ಡಾ.ರಾಜೇಂದ್ರ ಪವಾರ್ ಸ್ವಾಗತಿಸಿದರು. ಸಂಪಾದಕರ ಸಂಘದ ಉಪಾಧ್ಯಕ್ಷ ಹೀರೋಜಿ ಮಾವರ್ಕರ್, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ಮುಚ್ಚಳಂಬಿ, ಲೋಕದರ್ಶನದ ಸಹಾಯಕ ಸಂಪಾದಕಿ ಜಯಲಕ್ಷ್ಮಿ ದೇಸಾಯಿ, ಸಂಘದ ರಾಜ್ಯ ಕಾರ್ಯದರ್ಶಿ ಆರ್. ಶರಣಪ್ಪ ಗುಮಗೇರಾ, ಟ್ರಸ್ಟಿಗಳಾದ ಎ.ಬಿ. ಧಾರವಾಡಕರ್,ವಸಂತ ಹೊಸಮನಿ, ಬಸವರಾಜ ಪುಟ್ಟಿ, ಕಲ್ಬುರ್ಗಿಯ ಆನಂದ ಮಣ್ಣೂರ್, ಉಪಸ್ಥಿತರಿದ್ದರು.
ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆಗಳು ಮುಂದಾಗಬೇಕು: ಡಾ. ಅಲ್ಲಮಪ್ರಭು ಶ್ರೀಗಳು

WhatsApp Group
Join Now


