ಬೆಳಗಾವಿ ನಗರದಲ್ಲಿ 40ರಿಂದ 50 ಸ್ಥಳಗಳಲ್ಲಿ ತಪಾಸಣೆ; ಅಪ್ರಾಪ್ತರ ಪ್ರವೇಶ, ಶಬ್ದ ಮಾಲಿನ್ಯ ಹಾಗೂ ಸಮಯ ಮೀರುವುದರ ಮೇಲೆ ನಿಗಾ
ಬೆಳಗಾವಿ10.ಅ: ನವರಾತ್ರಿ ದಾಂಡಿಯಾ ಉತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ತಡೆಯಲು ಬೆಳಗಾವಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ನಗರದ ಹೋಟೆಲ್‌ಗಳು, ಪಬ್‌ಗಳು, ಬಾರ್‌ಗಳು, ಡಾಬಾಗಳು ಹಾಗೂ ಮದ್ಯದಂಗಡಿಗಳಲ್ಲಿ ವಿಶೇಷ ತಪಾಸಣೆ ನಡೆಸಲಾಗುತ್ತಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇನ್ಸ್‌ಪೆಕ್ಟರ್‌ಗಳು, ಪಿಎಸ್‌ಐಗಳು ಸೇರಿದಂತೆ ಪೊಲೀಸ್ ಅಧಿಕಾರಿಗಳು ತಂಡಗಳನ್ನು ರಚಿಸಿಕೊಂಡು ತಪಾಸಣೆ ನಡೆಸುತ್ತಿದ್ದಾರೆ. ಒಟ್ಟಾರೆ 40ರಿಂದ 50 ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಹೋಟೆಲ್‌ಗಳು, ಡಾಬಾಗಳು ಮತ್ತು ಮದ್ಯದಂಗಡಿಗಳಲ್ಲಿ ನಿಯಮ ಪಾಲನೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
*ಅಪ್ರಾಪ್ತರ ಪ್ರವೇಶಕ್ಕೆ ಕಡಿವಾಣ*
ಹೋಟೆಲ್‌ಗಳು, ಪಬ್‌ಗಳು ಹಾಗೂ ಇತರ ಸ್ಥಳಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಪ್ರವೇಶಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಗ್ರಾಹಕರ ಗುರುತಿನ ಚೀಟಿಗಳನ್ನು ತಪಾಸಣೆ ಮಾಡಲಾಗುತ್ತಿದೆ. ಈವರೆಗೆ ಪರಿಶೀಲಿಸಿದ ಸ್ಥಳಗಳಲ್ಲಿ ಅಪ್ರಾಪ್ತರ ಪ್ರವೇಶ ಸೇರಿದಂತೆ ಯಾವುದೇ ಗಂಭೀರ ಉಲ್ಲಂಘನೆ ಕಂಡುಬಂದಿಲ್ಲ ಎಂದು ಪೊಲೀಸ್ ಕಮಿಷನರ್ ನಿಕಂ ತಿಳಿಸಿದ್ದಾರೆ. ಆದಾಗ್ಯೂ, ತಪಾಸಣೆ ಮುಂದುವರಿದಿದ್ದು, ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
*ರಾತ್ರಿ 11 ಗಂಟೆಯ ಗಡುವು*
ನಗರದಲ್ಲಿ ಹೋಟೆಲ್‌ಗಳು, ಪಬ್‌ಗಳು ಹಾಗೂ ಮದ್ಯದಂಗಡಿಗಳಿಗೆ ನಿಗದಿಪಡಿಸಿರುವ ಸಮಯದ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಮದ್ಯದಂಗಡಿಗಳು ರಾತ್ರಿ 10 ಗಂಟೆಯೊಳಗೆ ಮುಚ್ಚಬೇಕು ಹಾಗೂ ಪಬ್‌ಗಳಿಗೆ ರಾತ್ರಿ 11 ಗಂಟೆಯವರೆಗೆ ಸಮಯಾವಕಾಶವಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನಿಗದಿತ ಸಮಯ ಮೀರಿ ಕಾರ್ಯನಿರ್ವಹಿಸುವುದು ಅಥವಾ ಶಬ್ದದ ಮಿತಿಯನ್ನು ಉಲ್ಲಂಘಿಸುವುದು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು.
ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ರೀತಿಯಲ್ಲಿ ಶಬ್ದ ಮಾಡುವುದು, ರಾತ್ರಿ ವೇಳೆ ಗದ್ದಲ ಸೃಷ್ಟಿಸುವುದು ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತರುವ ಚಟುವಟಿಕೆಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ. ನಿಯಮ ಉಲ್ಲಂಘಿಸುವ ಹೋಟೆಲ್‌ಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳ ವಿರುದ್ಧ ಸಾರ್ವಜನಿಕ ಉಪದ್ರವಕ್ಕೆ ಸಂಬಂಧಿಸಿದ ಕಾನೂನು ನಿಬಂಧನೆಗಳ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
*ದಾಂಡಿಯಾ ಆಯೋಜಕರೊಂದಿಗೆ ಆಯಾ ಪೊಲೀಸ್ ಠಾಣೆಗಳಲ್ಲಿ ಸಭೆ*
ನವರಾತ್ರಿ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಆಯೋಜಿಸಲಾಗುತ್ತಿರುವ ದಾಂಡಿಯಾ ಕಾರ್ಯಕ್ರಮಗಳ ಸಂಘಟಕರೊಂದಿಗೂ ಪೊಲೀಸರು ಸಭೆ ನಡೆಸಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸೂಚಿಸಲಾಗಿದೆ. ಕಾರ್ಯಕ್ರಮ ಮುಗಿದ ಬಳಿಕ ಮಹಿಳೆಯರು ಸುರಕ್ಷಿತವಾಗಿ ಮನೆಗೆ ತೆರಳುವವರೆಗೆ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ದಾಂಡಿಯಾ ಕಾರ್ಯಕ್ರಮಗಳಿಗೆ ಸಾಮಾನ್ಯವಾಗಿ ರಾತ್ರಿ 10 ಗಂಟೆಯವರೆಗೆ ಅನುಮತಿ ನೀಡಲಾಗಿದ್ದು, ಕೊನೆಯ ಎರಡು ದಿನಗಳಲ್ಲಿ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಗತ್ಯಕ್ಕೆ ಅನುಗುಣವಾಗಿ ರಾತ್ರಿ 11 ಗಂಟೆಯವರೆಗೆ ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಕ್ರಮದ ಬಳಿಕ ಯುವಕರು ಅನಗತ್ಯವಾಗಿ ಗುಂಪುಗೂಡಿ ಗದ್ದಲ ಸೃಷ್ಟಿಸುವುದನ್ನು ತಡೆಯಲು ಪೊಲೀಸ್ ಗಸ್ತು ಹೆಚ್ಚಿಸಲಾಗುವುದು.
*ನಿಯಮ ಪಾಲಿಸುವಂತೆ ಪೊಲೀಸರ ಮಾನ್ಯ ಪೊಲೀಸ್ ಕಮಿಷನರ್ ಮನವಿ*
ನಗರದ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ತಪಾಸಣೆ ಮುಂದುವರಿಯಲಿದ್ದು, ಹೋಟೆಲ್‌ಗಳು, ಪಬ್‌ಗಳು, ಬಾರ್‌ಗಳು, ಡಾಬಾಗಳು ಮತ್ತು ಮದ್ಯದಂಗಡಿಗಳ ಮಾಲೀಕರು ಹಾಗೂ ನಿರ್ವಾಹಕರು ನಿಗದಿತ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪೊಲೀಸರು ಸೂಚಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಚಟುವಟಿಕೆಗಳು ಕಂಡುಬಂದಲ್ಲಿ ಅಥವಾ ನಿಗದಿತ ಸಮಯವನ್ನು ಮೀರಿ ಕಾರ್ಯನಿರ್ವಹಿಸಿದಲ್ಲಿ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ತಪಾಸನೆ ವೇಳೆಯಲ್ಲಿ ಡಿಸಿಪಿ ನಾರಾಯಣ ಬರಮನಿ ಡಿಸಿಪಿ ಕ್ರೈಂ ಹಿರಿಯ ಅಧಿಕಾರಿಗಳು ಎಸಿಪಿ ಸಿಪಿಐ ಕಾಲಿಮಿರ್ಚಿ ವಿವಿಧ ಠಾಣೆ ಸಿಪಿಐ ಗಳು ಪಿಎಸ್ಐ ಗಳು ಅಧಿಕಾರಿಗಳು ಉಪಸ್ಥಿತರಿದ್ದರು……………….



