State

ಅಮೃತವರ್ಷದಲ್ಲಿ ಕಾಲಿಟ್ಟ ಕವಿ, ಕನ್ನಡ ಚಿಂತಕ ಶ್ರೀ ಪಾಂಡುರಂಗ. ಬಿ. ಸ್ವಾಮಿ

WhatsApp Group Join Now
Telegram Group Join Now

( ಇದೆ ದಿ. ೧೧-೧೧-೨೦೨೩ ರಂದು ಬೆಳಗಾವಿಯಲ್ಲಿ ಶ್ರೀ ಪಿ. ಬಿ. ಸ್ವಾಮಿ ಅವರಿಗೆ ಅಮೃತ ಮಹೋತ್ಸವ ಸನ್ಮಾನದ ನಿಮಿತ್ತ ಅವರ ಜೀವನ ಸಾಧನೆಗಳ ಕಿರುನೋಟ).
ಸರ್ವಧರ್ಮ ಸಮನ್ವಯ ಕೇಂದ್ರವೆನಿಸಿದ ಮೂಡಲಗಿಯ ಶ್ರೀ ಶಿವಬೋಧಸ್ವಾಮಿ ಮಠದ ಸತ್ಪರಂಪರೆಯಲ್ಲಿ ೧೯೪೯ ರ ಡಿಸೆಂಬರ್ ೨೫ ರಂದು ದತ್ತ ಜಯಂತಿಯ ಶುಭ ಗಳಿಗೆಯಲ್ಲಿ ಜನಿಸಿದ ಶ್ರೀ ಪಾಂಡುರಂಗ ಸ್ವಾಮಿಯವರಿಗೆ ಈಗ ಎಪ್ಪತ್ತೈದರ ಅಮೃತ ಸಂಭ್ರಮ. ತಂದೆ ಭಾವೂರಾವ್ ಸ್ವಾಮಿ ಮತ್ತು ತಾಯಿ ಲಕ್ಷ್ಮೀಬಾಯಿ ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರು. ಸುಸಂಸ್ಕೃತ ಮನೆತನ. ಪಾಂಡುರಂಗ ಅವರು ದೇಶಪ್ರೇಮ, ಕನ್ನಡಪ್ರೇಮ ಎರಡನ್ನೂ ಮೈಗೂಡಿಸಿಕೊಂಡು ಬೆಳೆದವರು. ಬೆಳಗಾವಿಯಲ್ಲಿ ಪ್ರಾರಂಭಿಕ ಶಿಕ್ಷಣ ಮುಗಿಸಿದ ಅವರು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ. ಎಸ್.ಸಿ.( ಅಗ್ರಿ) ಪದವೀಧರರಾಗಿ ಸರ್ಕಾರಿ ಸೇವೆಗೆ ಸೇರಿ ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಕೃಷಿ ಇಲಾಖೆಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ , ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯೆಂದು ೧೯೯೨ ರಲ್ಲಿ ಕೇಂದ್ರ ಸರಕಾರದಿಂದಲೇ “ನ್ಯಾಶನಲ್ ಪ್ರೊಡಕ್ಟಿವಿಟಿ ಅವಾರ್ಡ್ ಪಡೆದರು. ಗಡಿಭಾಗವಾದ ಬೆಳಗಾವಿಯಲ್ಲಿ ಬಿಡಿಓ ಮತ್ತು ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾಗ ತಮ್ಮ ಅಧಿಕಾರದ ಮಿತಿಯಲ್ಲೇ ೧೦೨ ಕನ್ನಡ ಪ್ರಾಥಮಿಕ ಶಾಲಾ ಕೊಠಡಿಗಳ ನಿರ್ಮಾಣ ಸಹಿತ ಹಲವು ಕನ್ನಡಪರ ಕಾರ್ಯಗಳನ್ನು ಮಾಡಿ ತಮ್ಮ ಕನ್ನಡಾಭಿಮಾನವನ್ನು ಮೆರೆದವರು.
ಬೈಲಹೊಂಗಲದಲ್ಲಿ ಕೃಷಿ ಸಹಾಯಕ ನಿರ್ದೇಶಕರಾಗಿ ನಿವೃತ್ತಿ ಹೊಂದಿದ ಪಿ. ಬಿ. ಸ್ವಾಮಿಯವರು ಸಾಹಿತ್ಯಾಸಕ್ತಿಯನ್ನು ತಮ್ಮ ಹವ್ಯಾಸಿಯಾಗಿರಿಸಿಕೊಂಡು ಆರೇಳು ಕೃತಿಗಳನ್ನು ರಚಿಸಿದ್ದಾರೆ.
ಚುಟುಕು ಕಾವ್ಯ, ಚಿಗುರು ಚುಟುಕು, ಕವನ ಕುಸುಮ ಎಂಬ ಕಾವ್ಯಕೃತಿಗಳನ್ನು ಅಲ್ಲದೆ, ಮೂಡಲಗಿ ಶ್ರೀಮಠದ ಚರಿತ್ರೆ, ನನ್ನ ಅಪ್ಪಾಜಿ, ಮನದಾಳದ ಮಹನೀಯರು ಮತ್ತು ಘಟನೆಗಳು ಎಂಬ ಗದ್ಯಕೃತಿಗಳನ್ನೂ ಹೊರತಂದಿದ್ದಾರೆ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾಗಿ ನಿರಂತರ ಕಾರ್ಯಚಟುವಟಿಕೆಯಲ್ಲಿರುವ ಸ್ವಾಮಿಯವರು ನಾಗನೂರು ಮಠದಿಂದ ಸೇವಾರತ್ನ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಪಿ. ಬಿ. ಸ್ವಾಮಿಯವರ ತಂದೆ ಭಾವೂರಾವ್ ಸ್ವಾಮಿಯವರು ಸಂತ ವಿನೋಬಾ ಭಾವೆಯವರ ಶಿಷ್ಯರಾಗಿ ಭೂದಾನ ಚಳವಳಿಯಲ್ಲಿ ಪಾಲ್ಗೊಂಡವರಾಗಿದ್ದು ಮೂಡಲಗಿಯಲ್ಲಿ ಸಾರ್ವಜನಿಕ ಕಾರ್ಯಗಳಿಗಾಗಿ ಸಾಕಷ್ಟು ಭೂಮಿಯನ್ನು ದಾನವಾಗಿ ನೀಡಿದ್ದಾರೆ. ಅವರ ಆದರ್ಶವನ್ನು ಅನುಸರಿಸಿ ಪಾಂಡುರಂಗ ಸ್ವಾಮಿಯವರು ಸಹ ಅನೇಕ ಸಾರ್ವಜನಿಕ ಸೇವಾ ಕಾರ್ಯಗಳನ್ನು ಮಾಡಿದ್ದಾರೆ. ಅಪಾರ ಧಾರ್ಮಿಕ ಶ್ರದ್ಧೆ, ದೇಶಪ್ರೇಮ ಮತ್ತು ಕನ್ನಡಾಭಿಮಾನಗಳಿಂದ ಕೂಡಿದ ಅವರದು ಸಹಧರ್ಮಿಣಿ ಅರುಣಾತಾಯಿ, ಓರ್ವ ಪುತ್ರ ರಾಘವೇಂದ್ರ, ಪುತ್ರಿ ಗೌರಿ ಮತ್ತು ಸೊಸೆ ಪೂರ್ಣಿಮಾ ಅವರನ್ನೊಳಗೊಂಡ ಸುಖೀ ಸಂಸಾರ. ಎಪ್ಪತ್ತೈದನೆಯ ವರ್ಷದ ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಅವರು ಶತಮಾನದ ಬದುಕು ಕಾಣಲಿ ಎನ್ನುವುದು ಅವರ ಮಿತ್ರ ಹಿತೈಷಿಗಳ, ಬಂಧುಬಳಗದವರ ಹಾರೈಕೆಯಾಗಿದೆ.
ಹಿರಿಯ ಕವಿ ಶ್ರೀ ಜಿನದತ್ತ ದೇಸಾಯಿ, ಡಾ. ಬಸವರಾಜ ಜಗಜಂಪಿ, ಜಿಲ್ಲಾ ಚುಸಾಪ ಅಧ್ಯಕ್ಷ ಎಲ್. ಎಸ್. ಶಾಸ್ತ್ರಿ, ಕಾರ್ಯಾಧ್ಯಕ್ಷ ಡಾ. ಸಿ. ಕೆ. ಜೋರಾಪುರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಅಶೋಕ ಮಳಗಲಿ, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಜಯಶೀಲಾ ಬ್ಯಾಕೂಡ, ಬೆಳಗಾವಿ ಹಾಸ್ಯಕೂಟದ ಸಂಚಾಲಕ ಗುಂಡೇನಟ್ಟಿ ಮಧುಕರ, ಕೃಷ್ಣಮೂರ್ತಿ ಪುರಾಣಿಕ ಪ್ರತಿಷ್ಠಾನದ ಗೌ. ಕಾರ್ಯದರ್ಶಿ ಆನಂದ ಪುರಾಣಿಕ, ಜಿಲ್ಲಾ ಚುಸಾಪ ಗೌ. ಕಾರ್ಯದರ್ಶಿ ಬಸವರಾಜ ಗಾರ್ಗಿ, ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಗೌ. ಕಾರ್ಯದರ್ಶಿ ಆರ್. ಬಿ. ಕಟ್ಟಿ, ಸಾಹಿತಿ ಎಂ. ಎ. ಪಾಟೀಲ ಮೊದಲಾದವರು ಪಿ. ಬಿ. ಸ್ವಾಮಿಯವರಿಗೆ ಅಮೃತ ಮಹೋತ್ಸವದ ಶುಭಾಶಯ ಕೋರಿದ್ದಾರೆ.

WhatsApp Group Join Now
Telegram Group Join Now

Related Posts