World

ಮಹಿಳೆಗೆ ಜಗದ್ಗುರು ಸ್ಥಾನ ನೀಡಿದ ಧರ್ಮ ಲಿಂಗಾಯಿತ ಧರ್ಮ: ಜಗದ್ಗುರು ಡಾ.ಮಾತೆ ಗಂಗಾದೇವಿ

WhatsApp Group Join Now
Telegram Group Join Now

ಬೆಳಗಾವಿ (ಅಕ್ಕಮಹಾದೇವಿ ವೇದಿಕೆ); ಜಗತ್ತಿನಲ್ಲಿ ಪ್ರಪ್ರಥಮವಾಗಿ ಮಹಿಳೆಯೊಬ್ಬಳಿಗೆ ಜಗದ್ಗುರು ಸ್ಥಾನವನ್ನು ನೀಡಿ ಗೌರಿಸಿದ ಧರ್ಮ ಎಂದರೆ ಅದು ಲಿಂಗಾಯತ ಧರ್ಮ ಮಾತ್ರ ಎಂದು ಕೂಡಲಸಂಗಮ ಶ್ರೀ. ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಜಗದ್ಗುರು ಡಾ.ಗಂಗಾ ಮಾತಾಜಿಯವರು ಹೇಳಿದರು.

ಅವರಿಂದು ಬೆಳಗಾವಿಯಲ್ಲಿ ನಾಗನೂರು ರುದ್ರಾಕ್ಷಿ ಮಠದ ಆರ್.ಎನ್.ಶೆಟ್ಟಿ ಪೊಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಪ್ರಥಮ ಮಹಿಳಾ ಸಮಾವೇಶದ ಸರ್ವಾಧ್ಯಕ್ಷತೆಯನ್ನು ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮಹಿಳೆಯನ್ನು ಕಸಕ್ಕಿಂತ ಕಡೆಯಾಗಿ ಕಾಣುತ್ತಿದ್ದ ಸಮಯದಲ್ಲಿ ಮಹಿಳೆಗೆ ತಮ್ಮ ಸರಿ ಸಮಾನವಾದ ಸ್ಥಾನಮಾನವನ್ನು ನೀಡಿ ಬೆಳೆಸಿದ ಬಸವಣ್ಣನವರಾದಿಯಾಗಿ ಸಮಸ್ತ ಶರಣರು ಹಾಕಿಕೊಟ್ಟ ಧರ್ಮ ತತ್ವ ಸಿದ್ಧಾಂತ ಅರಿತುಕೊಂಡು ಅವರ ಮಾರ್ಗದಲ್ಲಿ ನಡೆಯುವ ಮೂಲಕ ಅವರೆಲ್ಲರನ್ನು ಗೌರವಿಸಬೇಕು ಐವತ್ತು ವರ್ಷಗಳ ಹಿಂದೆ ಕೂಡಲಸಂಗಮ ಬಸವ ಧರ್ಮ ಪೀಠದ ಜಗದ್ಗುರುವಾಗಿ ಮಾತೇ ಮಹದೇವಿಯವರನ್ನು ನೇಮಿಸಲ್ಪಟ್ಟಾಗ ಅದನ್ನು ಸಮಾಜ ಸುಲಭವಾಗಿ ಸ್ವೀಕರಿಸಲಿಲ್ಲ ಸವಾಲುಗಳ ಮತ್ತು ಕಷ್ಟಗಳನ್ನು ಅವರು ಎದುರಿಸಬೇಕಾಗಿತ್ತು , ಅದಕ್ಕೆಲ್ಲ ಧೈರ್ಯ ತುಂಬಿ ಬೆನ್ನೆಲುಬಾಗಿ ನಿಂತ ಲಿಂಗೈಕ್ಯ ಜಗದ್ಗುರು ಲಿಂಗಾನಂದ ಮಹಾಸ್ವಾಮಿಜಿಯವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.
1970 ರ ದಶಕದಲ್ಲಿ ಮಾತೆ ಮಹಾದೇವಿಯವರು ಲಂಡನ್ನಿಗೆ ಹೋದಾಗ ಅಲ್ಲಿನ ಚರ್ಚುಗಳ ಮುಖ್ಯಸ್ಥರು ಜಗತ್ತಿನ ಪ್ರಥಮ ಮಹಿಳಾ ಜಗದ್ಗುರುವನ್ನು ಕಂಡು ಬೆರಗಾದರು ಆಗಲೇ ಲಿಂಗಾಯಿತ ಧರ್ಮವನ್ನು ಅವರು ಕೊಂಡಾಡಿದರು ಮಹಿಳೆಯೊಬ್ಬಳಿಗೆ ಜಗದ್ಗುರುವಿನ ಪಟ್ಟವನ್ನು ನೀಡಿದ ಲಿಂಗಾಯತ ಧರ್ಮದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು ಅಷ್ಟೇ ಅಲ್ಲ ಅಲ್ಲಿನ ಚರ್ಚುಗಳಲ್ಲಿ ಮಾತಾಜಿಯವರ ಪ್ರವಚನಗಳನ್ನು ಏರ್ಪಡಿಸಿ ಖುಷಿ ಪಟ್ಟರು ಎಂಬುದನ್ನು ಗಂಗಾ ಮಾತಾಜಿಯವರು ನೆನಪಿಸಿಕೊಂಡರು.
ಹಿಂದೆಂದಿಗಿಂತ ಇಂದಿನ ದಿನಮಾನಗಳಲ್ಲಿ ಮಹಿಳೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ತಾಯಿಗೆ ಧಾರ್ಮಿಕ ಸಂಸ್ಕಾರ ಇದ್ದರೆ ಆಕೆ ತನ್ನ ಮಕ್ಕಳಿಗೂ ಅದೇ ಸಂಸ್ಕಾರವನ್ನು ನೀಡುತ್ತಾಳೆ ತನ್ಮೂಲಕ ಇಡೀ ಮನೆತನವನ್ನೇ ಆಕೆ ಸರಿಯಾದ ಮಾರ್ಗಕ್ಕೆ ಕೊಂಡೊಯ್ಯುವಲ್ಲಿ ಶಕ್ತಳಾಗುತ್ತಾಳೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ತತ್ವ ಸಿದ್ಧಾಂತಗಳ ಅರಿವು ಇಲ್ಲದೆ ಇದ್ದಲ್ಲಿ ಆಕೆ ತನ್ನ ಮಕ್ಕಳಿಗೆ ಏನು ಕೊಡಲು ಸಾಧ್ಯ ಈ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಮಹಿಳೆಯ ಸ್ಥಾನ ಅತ್ಯಂತ ಪ್ರಮುಖವಾಗಿದೆ ಎಂದ ಮಾತಾಜಿಯವರು ಮೂಢಾಚಾರ, ಕಂದಾಚಾರ ,ಡಂಬಾಚಾರಗಳನು ಬಿಟ್ಟುಬಿಡಬೇಕು, ವಚನಗಳನ್ನು ಓದುವುದಕ್ಕಿಂತ ಅವುಗಳ ಅಧ್ಯಯನ ಮಾಡಿ ಪಚನ ಮಾಡಿಕೊಂಡಾಗ , ಅರ್ಥ ಮಾಡಿಕೊಂಡಾಗ ಮಾತ್ರ ಅವುಗಳ ಮಹತ್ವ ಅರ್ಥವಾಗುತ್ತದೆ ಎಂದು ಮಾತಾಜಿ ನುಡಿದರು.
ಸಮಾವೇಶವನ್ನು ಉದ್ಘಾಟಿಸಿದ ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಮಹಿಳೆಯರು ವೈದಿಕ ಧರ್ಮಾಚರಣೆ ನಿಲ್ಲಿಸಿ ಶರಣ ಧರ್ಮದ ಆಚರಣೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಲಿಂಗಾಯಿತ ಧರ್ಮದ ನಿಜ ಆಚರಣೆಗಳ ಬಗ್ಗೆ ತಿಳಿದುಕೊಳ್ಳಬೇಕು ಅಲ್ಲದೆ ತಮ್ಮ ಮನೆಯ ಜನಕ್ಕೂ ಅವನು ತಿಳಿಸಿ ಕೊಡುವ ಕಾರ್ಯವನ್ನು ಮಾಡಬೇಕು ಲಿಂಗ ನಿಷ್ಠೆಯನ್ನು ಬೆಳೆಸಿಕೊಳ್ಳಬೇಕು ಎಂದು ನುಡಿದರು.
ಶರಣ ಶ್ರೇಷ್ಠ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಣೆ ಮಾಡಿದ ಸರ್ಕಾರಕ್ಕೆ ಸಮಸ್ತ ಲಿಂಗಾಯತ ಸಮಾಜದ ವತಿಯಿಂದ ಕೃತಜ್ಞತೆಯನ್ನು ಜಗದ್ಗುರು ತೋಂಟದ ಸಿದ್ದರಾಮ ಮಹಾಸ್ವಾಮಿಗಳು ತಿಳಿಸಿದರು.
ಆಡಿ-ಹಂದಿಗುದ ಸಿದ್ದೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳು ಡಾ. ಟಿ. ಆರ್. ಚಂದ್ರಶೇಖರ್ ಮತ್ತು ಶ್ರೀಮತಿ ಮುಕ್ತಾ ಭಿ. ಕಾಗಲಿ ಅವರ ಸಂಪಾದಕತ್ವದ “ಮಹಿಳಾ ಜಾಗೃತಿ” ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿ ಮಾತನಾಡಿ ಮನೆಯ ದೀಪವನ್ನು ಬೆಳಗಿಸುವ ಹೆಣ್ಣುಮಗಳು ಸಮಾಜದ ದೀಪವನ್ನು ಸಹ ಬೆಳಗಿಸಬಲ್ಲಳು ಎಂದರಿತ ಶರಣರು ಹೆಣ್ಣು ಮಕ್ಕಳಿಗೆ ಸಮಾನ ಅಧಿಕಾರವನ್ನು ನೀಡಿದರು , ಅಷ್ಟೇ ಅಲ್ಲ ಅವಳಿಗೆ ಗುರುವಿನ ಸ್ಥಾನವನ್ನು ಜಗದ್ಗುರುವಿನ ಸ್ಥಾನವನ್ನು ಸಹ ನೀಡಿ ಗೌರವಿಸಿದರು ಲಿಂಗಾಯಿತರು ತಮ್ಮ ಗುರಿಯನ್ನು ತಲುಪುವ ದಿನಗಳು ದೂರವಿಲ್ಲ ಇತ್ತೀಚೆಗೆ ಎಲ್ಲರೂ ಲಿಂಗಾಯತ ಮಹಾಸಭೆ ವಿಚಾರಗಳನ್ನು ಸರಿಯೆಂದು ಒಪ್ಪುತ್ತಿದ್ದಾರೆ ಆದರೆ ಕೆಲವು ಕೊಂಡಿ ಮಂಚಣ್ಣನಂಥವರು ಮಾತ್ರ ವೀರಶೈವ ಲಿಂಗಾಯತ ಒಂದೇ ಎಂದು ಹೇಳುತ್ತಾ ಹೊರಟಿದ್ದಾರೆ ಇದು ಸರಿಯಲ್ಲ ಕೆಲವರು ಕಾವಿ ಬಟ್ಟೆ ಹಾಕಿಕೊಂಡು ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಅದನ್ನವರು ಬಿಡಬೇಕು ಇಲ್ಲವಾದರೆ ಕಾವಿ ಬಟ್ಟೆ ಬಿಚ್ಚಿಟ್ಟು ಹೊರ ಹೋಗಬೇಕು ಎಂದವರು ಅಸಮಾಧಾನ ವ್ಯಕ್ತಪಡಿಸಿದರು.
ಅಥಣಿ ಮೋಟಗಿ ಮಠದ ಪ್ರಭು ಚನ್ನಬಸವ ಮಹಾಸ್ವಾಮಿಗಳು ಡಾ. ಟಿ. ಆರ್. ಚಂದ್ರಶೇಖರ್ ವಿರಚಿತ “ಲಿಂಗಾಯತ ಧರ್ಮ ಮತ್ತು ಲಿಂಗ ಸಮಾನತೆ ತತ್ವ” ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ಬಸವೇಶ್ವರರ ಕನಸು ನನಸಾಗುವ ಕಾಲ ಕೂಡಿಬಂದಿದೆ ಇಂಥ ಸಂದರ್ಭದಲ್ಲಿ ಮತ್ತೊಂದು ಧಾರ್ಮಿಕ ಉತ್ಕ್ರಾಂತಿ ಆಗಬೇಕಾಗಿದೆ ಅದು ಮಹಿಳೆಯರಿಂದಲೇ ಆಗಬೇಕಾಗಿದೆ ಇದಕ್ಕೆ ಸಮಸ್ತ ಮಹಿಳೆಯರು ಸನ್ನದ್ಧರಾಗಬೇಕಿದೆ ಎಂದು ಹೇಳಿದರು.
ಅತ್ತಿವೇರಿ ಬಸವಧಾಮ ಪೀಠದ ಪೂಜ್ಯ ಬಸವೇಶ್ವರಿ ತಾಯಿಯವರು ಪ್ರಭಾ ಪಾಟೀಲ್ ವಿರಚಿತ “ವಚನ ಸನ್ನಿಧಿ” ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ವೈದಿಕ ಧರ್ಮದಲ್ಲಿ ಎಲ್ಲ ಕೆಡುಕಿನ ಮೂಲ ಹೆಣ್ಣು ಎಂದು ಹೇಳಿದ್ದರು ಅದೇ ಲಿಂಗಾಯತದಲ್ಲಿ ಹೆಣ್ಣು ಮಗಳನ್ನು ಅತ್ಯಂತ ಶ್ರೇಷ್ಠವೆಂದು ಹೇಳಿ ಎಲ್ಲ ರೀತಿಯ ಸಾಮಾಜಿಕ, ಧಾರ್ಮಿಕ ಸ್ಥಾನಮಾನಗಳನ್ನು ನೀಡಿ ಗೌರವಿಸಿದರು ಇದೇ ಲಿಂಗಾಯತ ಧರ್ಮದ ವೈಶಿಷ್ಟ್ಯ ಎಂದರು.
ಬೀದರಿನ ಲಿಂಗಾಯಿತ ಮಹಾಮಠದ ಡಾ.ಅಕ್ಕ ಅನ್ನಪೂರ್ಣಾ ತಾಯಿ ಅವರು ಡಾ. ಜಯಶ್ರೀ ಸಬರದ ವಿರಚಿತ ” ಶಿವಶರಣೆಯರ ಸಾಹಿತ್ಯ ಚರಿತ್ರೆ ” ಕ್ರತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ಅಂಗಕ್ಕೆ ಲಿಂಗವನ್ನು ತಂದ ಬಸವಣ್ಣನನ್ನು ನೆನೆದರೆ ಮಹಿಳೆಗೆ ಅಗಾಧವಾದ ಶಕ್ತಿ ಪ್ರಾಪ್ತವಾಗುತ್ತದೆ ಈ ಹಿನ್ನೆಲೆಯಲ್ಲಿ ಲಿಂಗಾಯತ ಧರ್ಮದ ಆಚರಣೆಗಳನ್ನು ತಪ್ಪದಂತೆ ಮಾಡಬೇಕು ಎಂದರು.
ಡಾ.ಬಸವರಾಜ ಸಬರದ ವಿರಚಿತ “ಲಿಂಗಾಯತ ಧರ್ಮ ” ಕೃತಿಯನ್ನು ಗೋಕಾಕ ಶೂನ್ಯ ಸಂಪಾದನಾ ಮಠದ ಮುರುಘೇಂದ್ರ ಮಹಾಸ್ವಾಮಿಗಳು ಲೋಕಾರ್ಪಣೆ ಗೊಳಿಸಿದರು.
ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಜಾಗತೀಕರಣ ಮತ್ತು ರಾಷ್ಟ್ರೀಯ ಪ್ರಥಮ ಮಹಿಳಾ ಸಮಾವೇಶದ ಕುರಿತಾದ ವಿವರಗಳನ್ನು ನೀಡಿದರು.
ಶಿಕಾರಿಪುರ ಬಸವಾಶ್ರಮದ ಪೂಜ್ಯ ಶರಣಾಂಬಿಕಾ ತಾಯಿಯವರು ಕಾರ್ಯಕ್ರಮದ ಸಮ್ಮುಖದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಪತಿ ಡಾ. ಅಲ್ಲಮ ಪ್ರಭು ಮಹಾಸ್ವಾಮಿಗಳು ಸೇರಿದಂತೆ ನಾಡಿನ ಹಲವಾರು ಮಠಗಳ ಮಠಾಧೀಶರುಗಳು ಉಪಸ್ಥಿತರಿದ್ದರು.
ಮಾಜಿ ಸಚಿವರುಗಳಾದ ಶ್ರೀಮತಿ ಲೀಲಾದೇವಿ ಪ್ರಸಾದ್ ಮತ್ತು ಶ್ರೀಮತಿ ರಾಣಿ ಸತೀಶ್ ಸೇರಿದಂತೆ ಹಲವು ಗಣ್ಯ ಮಾನ್ಯರು ಉಪಸ್ಥಿತರಿದ್ದರು.ಕರ್ನಾಟಕ ಮಾತ್ರವಲ್ಲ ಹೊರ ರಾಜ್ಯಗಳಿಂದಲೂ ನಾಲ್ಕು ಸಾವಿರಕ್ಕೂ ಅಧಿಕ ಮಹಿಳಾ ಪ್ರತಿನಿಧಿಗಳು ೨ ದಿನಗಳ ಸಮಾವೇಶದಲ್ಲಿ ಭಾಗವಹಿಸಿದ್ದಾರೆ.ಜಾಗತೀಕ ಲಿಂಗಾಯತ ಮಹಾಸಭೆ ಬೆಳಗಾವಿ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಅವರು ಸ್ವಾಗತಿಸಿದರು, ಲಿಂಗಾಯತ ಮಹಾಸಭೆಯ ಬೆಂಗಳೂರು ಜಿಲ್ಲಾ ಉಪಾಧ್ಯಕ್ಷೆ ಶ್ರೀಮತಿ ಸುಜಾತ ಮೇಲೆ ಗೌಡ ಅವರು ವಂದಿಸಿದರು, ಲಿಂಗಾಯತ ಮಹಾಸಭೆಯ ಬೆಳಗಾವಿ ಮಹಿಳಾ ಜಿಲ್ಲಾ ಘಟಕದ ಉಪಾಧ್ಯಕ್ಷೆ ಶ್ರೀಮತಿ ಪ್ರೇಮಕ್ಕ ಅಂಗಡಿ ಕಾರ್ಯಕ್ರಮ ನಿರ್ವಹಿಸಿದರು.

ಸಂಗೀತ ವಿದುಷಿ ನಯನಾ ಗಿರಿಗೌಡರ ಮತ್ತು ೧೧೧ ಶರಣೆಯರಿಂದ ವಚನ ಪ್ರಾರ್ಥನೆ ಕಾರ್ಯಕ್ರಮ ನಡೆಯಿತು ಅದೇ ರೀತಿ ಕುಮಾರಿ ಪ್ರತಿಕ್ಷಾ ಹಿರೇಮಠ ಅವರಿಂದ ವಚನ ನೃತ್ಯ ಕಾರ್ಯಕ್ರಮ ನಡೆಯಿತು.
ಇಂದು ಬೆಳಿಗ್ಗೆ ಸಾಲಂಕೃತ ರಥದಲ್ಲಿ ಸಮಾವೇಶದ ಸರ್ವಾಧ್ಯಕ್ಷೆ ಜಗದ್ಗುರು ಡಾ. ಗಂಗಾ ಮಾತಾಜಿಯವರ ಮತ್ತು ವಚನ ಕಟ್ಟುಗಳ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಗೆ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಪತಿ ಡಾ. ಅಲ್ಲಮ ಪ್ರಭು ಮಹಾಸ್ವಾಮಿಗಳು ಚಾಲನೆ ನೀಡಿದರು, ಸರ್ವಾಧ್ಯಕ್ಷರು ಸಮಾವೇಶದ ಧ್ವಜಾರೋಹಣ ನೆರವೇರಿಸಿದರು.

WhatsApp Group Join Now
Telegram Group Join Now

Related Posts