World

ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯುವುದೇ ನಮ್ಮೆಲ್ಲರ ಧ್ಯೇಯ : ಮಾತೆ ಗಂಗಾದೇವಿ

WhatsApp Group Join Now
Telegram Group Join Now

ಬೆಳಗಾವಿ: ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯುವುದೇ ನಮ್ಮೆಲ್ಲರ ಧ್ಯೇಯ ಎಂದು ರಾಷ್ಟ್ರೀಯ ಲಿಂಗಾಯತ ಪ್ರಥಮ ಮಹಿಳಾ ಸಮಾವೇಶದ ಸರ್ವಾಧ್ಯಕ್ಷೆಯಾಗಿರುವ ಕೂಡಲಸಂಗಮದ ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಗಂಗಾದೇವಿ ಪ್ರತಿಪಾದಿಸಿದರು.
ನಗರದ ಆರ್‌.ಎನ್‌.ಶೆಟ್ಟಿ ಪಾಲಿಟೆಕ್ನಿಕ್‌ ಆವರಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾವೇಶದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

‘60 ವರ್ಷಗಳ ಹಿಂದೆ ಲಿಂ.ಲಿಂಗಾನಂದ ಸ್ವಾಮೀಜಿ ಬಸವ ಧರ್ಮದ ಪ್ರಚಾರ ಮತ್ತು ಪ್ರವಚನ ನಡೆಸುತ್ತಿದ್ದ ಸಂದರ್ಭದಲ್ಲಿ ಎದುರಿಸಿದ ಕಷ್ಟಗಳು ಅಷ್ಟಿಷ್ಟಲ್ಲ. ಅಂದು ಲಿಂಗಾನಂದ ಶ್ರೀಗಳು ಕಷ್ಟಕ್ಕೆ ಹೆದರಿ ಹಿಂದೆ ಸರಿದಿದ್ದರೆ, ಇಂದು ನಾವು ಈ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಬಸವ ಪರಂಪರೆಯ ಹಿನ್ನೆಲೆ ಹೊಂದಿದ್ದ ಅವರು, ಅಪಾರ ಕಳಕಳಿ ಹೊಂದಿದ್ದರು. 19ನೇ ವಯಸ್ಸಿನಲ್ಲೇ ದೀಕ್ಷೆ ಪಡೆದು, ಕಳೆದ 40 ವರ್ಷಗಳಿಂದ ಪ್ರವಚನ ಮಾಡಿದ ಸಂದರ್ಭವನ್ನು ಅವರು ನೆನಪಿಸಿಕೊಂಡರು.

ನಾಗನೂರು ರುದ್ರಾಕ್ಷಿಮಠದಲ್ಲಿ ಶಿಕ್ಷಣ ಪಡೆದ ಲಿಂಗೈಕ್ಯ ಲಿಂಗಾನಂದ ಶ್ರೀಗಳು, ನಾಡಿನುದ್ದಕ್ಕೂ ಬಸವ ಧರ್ಮ ಮತ್ತು ವಚನ ಸಾಹಿತ್ಯ ಪಸರಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. 12ನೇ ಶತಮಾನದ ಪೂರ್ವದಲ್ಲಿ ಮಹಿಳೆಗೆ ಯಾವುದೇ ಸ್ಥಾನಮಾನ ಇರಲಿಲ್ಲ. ಬಸವಣ್ಣನವರು ಮಹಿಳೆಗೆ ಸರಿಸಮನಾದ ಸ್ಥಾನಮಾನ ನೀಡಿದರು ಎಂದ ಅವರು, ಬಸವಣ್ಣನವರು ಪ್ರಾಣ ವಚನ ಸಾಹಿತ್ಯದಲ್ಲಿದೆ. ಅದನ್ನು ಉಳಿಸುವುದಕ್ಕಾಗಿ ಪ್ರಾಣತೆತ್ತ ಅಸಂಖ್ಯ ಶರಣರ ತ್ಯಾಗ ಮತ್ತು ಬಲಿದಾನವನ್ನು ನಾವು ಇಂದು ನೆನಪಿಸಿಕೊಳ್ಳಬೇಕು. ವಚನ ಸಾಹಿತ್ಯವನ್ನು ಮನೆ–ಮನೆಗೆ ತಲುಪಿಸಿದ ಶ್ರೇಯ ಲಿಂಗಾನಂದ ಸ್ವಾಮೀಜಿಗೆ ಸಲ್ಲುತ್ತದೆ. ನಂತರದ ಕಾಲಘಟ್ಟದಲ್ಲಿ ವಚನ ಸಾಹಿತ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ನಾಡಿನುದ್ದಕ್ಕೂ ಪ್ರಚಾರ ಮಾಡಿದ ಹಿರಿಮೆ ಲಿಂಗೈಕ್ಯ ಪ್ರಥಮ ಮಹಿಳಾ ಜಗದ್ಗುರು ಮಾತೆ ಮಹಾದೇವಿ ಅವರಿಗೆ ಸಲ್ಲುತ್ತದೆ. ಮೊದಲ ಮಹಿಳಾ ಪೀಠ ಧಾರವಾಡದಲ್ಲಿ ಸ್ಥಾಪನೆಯಾದಾಗ ಅವರು ಎದುರಿಸಿದ ವಿರೋಧ ಅಷ್ಟಿಷ್ಟಲ್ಲ. ಅದರ ಮಧ್ಯೆಯೂ ಮಹಿಳಾ ಜಗದ್ಗುರು ಪೀಠ ಸ್ಥಾಪನೆಯಾಯಿತು ಎಂದು ಸ್ಮರಿಸಿದರು.

ಇಲ್ಲಿ ನಡೆದ ಗೋಷ್ಠಿಗಳಲ್ಲಿ ಮಾತನಾಡಿದ ಹಲವುವರು ಯಾರ್ಯಾರದ್ದೋ ಹೆಸರುಗಳನ್ನು ಉಲ್ಲೇಖಿಸಿದರು. ಮಾತೆ ಮಹಾದೇವಿ ಹೆಸರು ಉಲ್ಲೇಖಿಸಲಿಲ್ಲ ಎಂದು ವಿಷಾದಿಸಿದರು.

ಜಾಗತಿಕ ಲಿಂಗಾಯತ ಮಹಾಸಭೆಯ ಮಹಾರಾಷ್ಟ್ರ ರಾಜ್ಯ ಮಹಿಳಾ ಘಟಕದ ಸಂಚಾಲಕಿ ಸರಳಾತಾಯಿ ಪಾಟೀಲ, ‘ಮಹಾರಾಷ್ಟ್ರದ ಪ್ರತಿ ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮಗಳಲ್ಲಿ ಮಹಾಸಭೆಯ ಘಟಕ ತೆರೆಯಲು ಪ್ರಯತ್ನಿಸುತ್ತೇನೆ. ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ನೀವೂ ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ’ ಎಂದರು.

ಇಳಕಲ್ಲದ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ, ‘ಲಿಂಗಾಯತ ಸಮುದಾಯಕ್ಕೆ ಮುಂದಿನ ದಿನಗಳು ಕರಾಳವಾಗಿವೆ. ಲಿಂಗಾಯತರ ಅಳಿವು–ಉಳಿವು ಸ್ವತಂತ್ರ ಧರ್ಮದ ಮಾನ್ಯತೆ ಮೇಲೆ ನಿಂತಿದೆ. ಹಾಗಾಗಿ ಎಲ್ಲ ಲಿಂಗಾಯತರು ಜಾಗತಿಕ ಲಿಂಗಾಯತ ಮಹಾಸಭೆಗೆ ಸದಸ್ಯರಾಗಬೇಕು. ಇದಕ್ಕಾಗಿ ಮಹಿಳೆಯರು ಮನೆಬಿಟ್ಟು ಹೊರಬಂದು, ಅಭಿಯಾನ ಆರಂಭಿಸಬೇಕು’ ಎಂದು ಹೇಳಿದರು.

ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಮಾರೋಪ ನುಡಿಗಳನ್ನಾಡಿದರು.

ನೇತೃತ್ವ ವಹಿಸಿದ್ದ ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ ಹಾಗೂ ಭಾಲ್ಕಿಯ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿದರು.

ರಾಜ್ಯ ಸರ್ಕಾರದಿಂದ ನೀಡಲಾಗುವ ‘ಬಸವಶ್ರೀ’ ಪ್ರಶಸ್ತಿಗೆ ಭಾಜನರಾದ ಸಾಹಿತಿ ಎನ್.ಜಿ.ಮಹಾದೇವಪ್ಪ, ನಿವೃತ್ತ ಪ್ರಾಧ್ಯಾಪಕ ವೀರಣ್ಣ ರಾಜೂರ ಅವರನ್ನು ಸನ್ಮಾನಿಸಲಾಯಿತು. ಮುಡಿಗುಂಡದ ವಿರಕ್ತಮಠದ ಶ್ರೀಕಂಠ ಸ್ವಾಮೀಜಿ, ಶೇಗುಣಸಿಯ ವಿರಕ್ತಮಠದ ಮಹಾಂತಪ್ರಭು ಸ್ವಾಮೀಜಿ, ಮಹಾಸಭೆಯ ರಾಷ್ಟ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಜಾಮದಾರ, ಬಸವರಾಜ ರೊಟ್ಟಿ, ಅಶೋಕ ಮಳಗಲಿ ಇತರರಿದ್ದರು. ಮೈತ್ರಿಯಿಣಿ ಗದಿಗೆಪ್ಪಗೌಡರ ನಿರೂಪಿಸಿದರು. ಪ್ರೀತಿ ಮಠದ ವಂದಿಸಿದರು. ಗೌರಮ್ಮ ಕರ್ಕಿ ಸ್ವಾಗತಿಸಿದರು. ನೈನಾ ಗಿರಿಗೌಡರ ಪ್ರಾರ್ಥಿಸಿದರು.
–––––––––––

ಸಮಾವೇಶದಲ್ಲಿ ಐದು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಅವು ಕೆಳಕಂಡಂತಿವೆ.

1) ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು, ಶಿವಮೊಗ್ಗದ ಪ್ರೀಡಂ ಪಾರ್ಕನ್ನು ಅಲ್ಲಮಪ್ರಭು ಉದ್ಯಾನವನ ಎಂದು ಕಿತ್ತೂರು ತಾಲೂಕನ್ನು ಚೆನ್ನಮ್ಮನ ಕಿತ್ತೂರು ತಾಲೂಕು ಎಂದು ಘೋಷಿಸಿದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹಾಗೂ ಸಚಿವ ಸಂಪುಟದ ಸದಸ್ಯರನ್ನು ಅಭಿನಂದಿಸಲಾಯಿತು.

2) ತರೀಕೆರೆಯಲ್ಲಿರುವ ವಿಶ್ವಗುರು ಬಸವಣ್ಣನವರ ಸಹೋದರಿ ಅಕ್ಕನಾಗಮ್ಮ ತಾಯಿಯವರ ಲಿಂಗೈಕ್ಯ ಸ್ಥಳ ಹಾಗೂ ಆ ಪ್ರದೇಶದಲ್ಲಿರುವ ಮಹಾಶರಣ ನುಲಿಯ ಚಂದಯ್ಯ ನವರ ಮತ್ತು ಇತರ ಕಾಯಕ ವರ್ಗದ ಶರಣರ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಯಿತು.‌

3). ನ್ಯಾಯಮೂರ್ತಿ ಡಾ. ಮೋಹನ್ ದಾಸ್ ವರದಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಇದಕ್ಕೆ ಕೇಂದ್ರ ಕೇಳಿರುವ ಹೆಚ್ಚಿನ ಮಾಹಿತಿಯನ್ನು ಪೂರೈಸಿ, ವರದಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲು ಆಗ್ರಹಿಸಲಾಯಿತು. ಇದಕ್ಕೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಪೂರೈಸಲು ನಿರ್ಣಯಿಸಲಾಯಿತು.

4). ಅವಿರಳ ಜ್ಞಾನಿ ಚನ್ನಬಸವೇಶ್ವರರ ಲಿಂಗೈಕ್ಯ ಸ್ಥಳ ಉಳವಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು “ಉಳವಿ ಅಭಿವೃದ್ಧಿ ಪ್ರಾಧಿಕಾರ” ರಚಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಯಿತು.

5). ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ಹೊರರಾಜ್ಯಗಳಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಮಹಿಳಾ ಘಟಕಗಳನ್ನು ಪ್ರಾರಂಭಿಸಲು ಸರ್ವಾನುಮತದಿಂದ ನಿರ್ಣಯಿಸಲಾಯಿತು.

WhatsApp Group Join Now
Telegram Group Join Now

Related Posts